ಅಂತರ್ಜಲ ನಿರ್ದೇಶನಾಲಯವು ಬೆಂಗಳೂರು ದಕ್ಷಿಣ, ಆನೇಕಲ್, ಬೆಂಗಳೂರು ಉತ್ತರ, ಯಲಹಂಕ, ಬೆಂಗಳೂರು ಪೂರ್ವ ಸೇರಿ ಬೆಂಗಳೂರಿನ ಐದು ತಾಲೂಕು ಕಡೆಗಳಲ್ಲಿ ಭೌಗೋಳಿಕ ಪ್ರದೇಶದ ಆನ್ವಯ ಪ್ರತಿ ತಾಲೂಕಿನ ಅಂತರ್ಜಲ ಮಟ್ಟ ಅಳೆಯಲಾಗಿದೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೇ, ಬೆಂಗಳೂರು ಉತ್ತರ ಆನೇಕಲ್, ಬೆಂಗಳೂರು ದಕ್ಷಿಣ ಹಾಗೂ ಯಲಹಂಕಗಳಲ್ಲಿ ಅಂತರ್ಜಲ ಮಟ್ಟ ಗಣನೀಯ ಕುಸಿತ ಕಂಡಿದೆ. ಅನಾವೃಷ್ಟಿಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಅತಿಯಾಗುತ್ತಿರುವ ಬಳಕೆಯೂ ಪ್ರಮುಖ ಕಾರಣ ಎನ್ನುತ್ತಿದ್ದಾರೆ. ಬೋರ್ವೆಲ್ ನೀರನ್ನು ನಗರವಾಸಿಗಳು ಬಹುವಾಗಿ ನೆಚ್ಚಿಕೊಂಡಿದ್ದು, ಅಂತರ್ಜಲ ಮಟ್ಟದ ಕುಸಿತ ಮುಂಬರುವ ದಿನಗಳಲ್ಲಿ ಜನಜೀವನಕ್ಕೆ ಸಂಕಷ್ಟ ಎದುರಾಗುವ ಸಂಭವ ಕಾಣುತ್ತಿದೆ.
ಹಾಗೆ ನೋಡಿದರೆ, ಕಳೆದ 2022ಹಾಗೂ 23ರಲ್ಲಿ ಬೆಂಗಳೂರಲ್ಲಿ ನಿರೀಕ್ಷೆಗೂ ಮೀರಿ ಮಳೆಯಾದ್ದರಿಂದ ಜಲ ಮಟ್ಟದಲ್ಲಿ ಸುಧಾರಣೆ ಕಂಡಿತ್ತು. ಈ ಬಾರಿ ಮಳೆ ಕಡಿಮೆಯಾದ ಪರಿಣಾಮ ನೀರಿನ ಮಟ್ಟ ಕುಸಿತ ಕಂಡಿದೆ. ಮಿತಿ ಮೀರಿ ನೀರು ಬಳಕೆ ಮಾಡುತ್ತಿದ್ದು, ದಿನೇ ದಿನೇ ಕೊಳವೆ ಬಾವಿ ಕೊರೆವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಭಿವೃದ್ದಿ ಹೆಸರಲ್ಲಿ ಮರಗಳನ್ನು ಕಡಿಯುತ್ತಾ ಬೆಂಗಳೂರನ್ನ ಕಾಂಕ್ರೀಟ್ ಕಾಡಾಗಿಸಿದ್ದು, ಶೇಕಡ ಎಂಬತ್ತೈದರಷ್ಟು ಕಾಂಕ್ರೀಟ್ ಕಟ್ಟಡಗಳೇ ತುಂಬಿಕೊಂಡಿದ್ದು ನೀರು ಸರಿಯಾಗಿ ಇಂಗದೇ ಅಂತರ್ಜಲಕ್ಕೆ ಕೊಡಲಿ ಏಟು ಬೀಳುತ್ತಿದೆ. ತಜ್ಞರ ಪ್ರಕಾರ ಸುಧಾರಣೆ ಕಾಣದೆ ಪರಿಹರಿಸಿಕೊಳ್ಳದೇ ಹೀಗೆಯೇ ಅಂತರ್ಜಲ ಕುಸಿತ ಕಂಡು, ನೀರಿನ ಬಳಕೆ ಹೆಚ್ಚುತ್ತಾ ಹೋದರೆ ಆತಂಕದ ಸ್ಥಿತಿ ನಿರ್ಮಾಣವಾಗಬಹುದು.