ಐಪಿಎಲ್ 2024 ರ ಆರನೇ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ಪಂಜಾಬ್ ಹಾಗೂ ಆರ್ ಸಿಬಿ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಗೆ ವೇಗಿ ಮೊಹಮ್ಮದ್ ಸಿರಾಜ್, ಜಾನಿ ಬೈರ್‌ಸ್ಟೋವ್ ವಿಕೆಟ್ ಉರುಳಿಸಿ ಆಘಾತ ನೀಡಿದರು. ಸಿರಾಜ್ ಎಸೆತವನ್ನು ಸಿಕ್ಸರ್ಗಟ್ಟುವ ಯತ್ನದಲ್ಲಿ ಬೈರ್‌ಸ್ಟೋವ್ ಕಿಂಗ್ ಕೊಹ್ಲಿಗೆ ಕ್ಯಾಚ್ ನೀಡಿದರು. ಈ ಕ್ಯಾಚ್ ಮೂಲಕ ಕೊಹ್ಲಿ ಒಟ್ಟಾರೆ ಟಿ20 ಕ್ರಿಕೆಟ್ ನಲ್ಲಿ 173 ನೇ ಕ್ಯಾಚ್ ಪೂರ್ಣಗೊಳಿಸಿದರು. ಈ ಮೂಲಕ ಟಿ20 ಕ್ರಿಕೆಟ್ಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತದ ಆಟಗಾರರ ಪೈಕಿ ಮೊದಲ ಸ್ಥಾನ ಗಳಿಸಿದರು.
ಈ ದಾಖಲೆ ಹಿಂದೆ ಸುರೇಶ್ ರೈನಾ ಹೆಸರಿನಲ್ಲಿತ್ತು. ಅವರು 172 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇದೀಗ ರೈನಾ ದಾಖಲೆ ಮುರಿದ ಕೊಹ್ಲಿ ಮೊದಲ ಸ್ಥಾನಕ್ಕೇರಿದರೆ, 167 ಕ್ಯಾಚ್ ಹಿಡಿದಿರುವ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ, ಐಪಿಎಲ್ ನಲ್ಲಿ ಕೊಹ್ಲಿ ಇಲ್ಲಿಯವರೆಗೆ 108 ಕ್ಯಾಚ್ ಪಡೆದಿದ್ದಾರೆ. ಐಪಿಎಲ್ ನಲ್ಲಿಯೇ ಅತೀ ಹೆಚ್ಚು ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದಿರುವ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. ಸುರೇಶ್ ರೈನಾ ಐಪಿಎಲ್‌ನಲ್ಲಿ ಒಟ್ಟು 109 ಕ್ಯಾಚ್ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಇನ್ನೂ 2 ಕ್ಯಾಚ್ ಹಿಡಿದರೆ ಐಪಿಎಲ್ ನಲ್ಲಿ ಕೂಡ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆ ಗಳಿಸಲಿದ್ದಾರೆ.