ಬೆಳಗಾವಿ: ಪೊಲೀಸ್ ಠಾಣೆ ಆವರಣದಲ್ಲಿಯೇ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ನಗರದ ಕ್ಯಾಂಪ್ ಪ್ರದೇಶದ ಸಂಚಾರಿ ಪೊಲೀಸ್ ಠಾಣಾ ಆವರಣದಲ್ಲಿಯೇ ಸುಮಾರು 40 ರಿಂದ 45 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ. ಠಾಣಾ ಆವರಣದಲ್ಲಿ ಜಪ್ತಿ ಮಾಡಿ ನಿಲ್ಲಿಸಿದ್ದ ಬಸ್ ನ ಹಿಂಬದಿ ಸೀಟ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ವ್ಯಕ್ತಿ ಕಳೆದ 10 ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯೋ ಅಥವಾ ಸಹಜ ಸಾವೋ ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಅಪರಿಚಿತ ವ್ಯಕ್ತಿ ಪೊಲೀಸ್ ಠಾಣಾ ಆವರಣದಲ್ಲಿ ಜಪ್ತಿ ಮಾಡಿ ನಿಲ್ಲಿಸಿದ್ದ ಬಸ್‌ನ ಹಿಂಬದಿ ಸೀಟ್ ನಲ್ಲಿ ಕುಳಿತಿರುವಾಗಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ದೇಹ ಕೊಳೆತು ವಾಸನೆ ಬಂದ ಕಾರಣ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಶವ ಇರುವುದು ಪತ್ತೆಯಾಗಿದೆ. ಶವ ಕೊಳೆತ ಕಾರಣ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.