ರಾಂಚಿ: ಗೋದಾಮಿನಲ್ಲಿ ಇಟ್ಟಿದ್ದ 10 ಕೆಜಿ ಗಾಂಜಾ, 9 ಕೆಜಿ ಭಾಂಗ್ ನ್ನು ಇಲಿಗಳೇ ತಿಂದು ಸಾಕ್ಷ್ಯ ನಾಶ ಮಾಡಿವೆ ಎಂದು ಪೊಲೀಸರು ಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ.
ವ್ಯಕ್ತಿಯೊಬ್ಬನಿಂದ ಜಪ್ತಿ ಮಾಡಿದ್ದ 10 ಕೆಜಿ ಗಾಂಜಾ, 9 ಕೆಜಿ ಭಾಂಗ್ ನ್ನು ಇಲಿಗಳೇ ತಿಂದಿವೆ ಎಂದು ಜಾರ್ಖಂಡ್‌ನ ಧನ್‌ಬಾದ್ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. 2018ರ ಡಿಸೆಂಬರ್ 14 ರಂದು ಇಲ್ಲಿನ ಪೊಲೀಸರು ನಡೆಸಿದ ದಾಳಿಯಲ್ಲಿ ಶಂಭು ಅಗರ್ವಾಲ್ ಆರೋಪಿಯಿಂದ ಗಾಂಜಾ ಮತ್ತು ಭಾಂಗ್ ಪಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ, ಆರೋಪಿಯನ್ನು ಕೂಡ ಬಂಧಿಸಲಾಗಿತ್ತು.
ವಿಚಾರಣೆ ಸಂದರ್ಭದಲ್ಲಿ ಸಾಕ್ಷ್ಯ ತೋರಿಸುವಂತೆ ನ್ಯಾಯಾಧೀಶರಾದ ರಾಮ್ ಶರ್ಮಾ ಅವರು, ತನಿಖಾಧಿಕಾರಿ ಜೈ ಪ್ರಕಾಶ್ ಪ್ರಸಾದ್ ಅವರಿಗೆ ಸೂಚಿಸಿದ್ದರು. ಆದರೆ, ಪೊಲೀಸರಿಗೆ ಹಾಜರುಪಡಿಸಲು ಆಗಿರಲಿಲ್ಲ. ಈ ವಸ್ತುಗಳನ್ನು ಇಲಿಗಳು ಸೇವಿಸಿ ನಾಶಪಡಿಸಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.
ಹೀಗಾಗಿ ಆರೋಪಿ ಶಂಭು ಅಗರ್ವಾಲ್ ಪರ ವಕೀಲರು, ನಮ್ಮ ಕಕ್ಷಿದಾರನನ್ನೇ ತಪ್ಪಾಗಿ ಬಂಧಿಸಲಾಗಿದೆ. ಕೋರ್ಟ್ ಗೆ ಸಾಕ್ಷಿ ಮುಖ್ಯ. ಪೊಲೀಸರು ಜಪ್ತಿ ಮಾಡಿದ್ದು, ನಿಜವೇ ಆದರೆ, ಹಾಜರುಡಿಸಬೇಕು. ಆದರೆ, ಹಾಜರುಪಡಿಸಲು ಆಗಿಲ್ಲ. ಹೀಗಾಗಿ ನಮ್ಮ ಕಕ್ಷಿದಾರನನ್ನು ಬಿಡುಗಡೆ ಮಾಡಬೇಕು ಎಂದು ವಾದಿಸಿದ್ದಾರೆ. ಸದ್ಯ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.