ಪುನೀತ್ ರಾಜ್ ಕುಮಾರ್ ತೀರಿಕೊಂಡರೂ, ಅವರ ಥಿಯೇಟರ್ ಕ್ರೇಜು ಕಮ್ಮಿಯಾಗಿಲ್ಲ ಎಂಬುದು, ಇತ್ತೀಚೆಗೆ ಮರು ಬಿಡುಗಡೆಕಂಡ ‘ಜಾಕಿ’ ಸಿನಿಮಾ ಭರ್ಜರಿ ಸದ್ದು ಮಾಡಿ ಪ್ರೂ ಮಾಡಿತ್ತು. ಇದೀಗ, ಅದೇ ಜಪದಲ್ಲಿ ಮತ್ತೊಂದು ಸಿನಿಮಾ ರೀರಿಲೀಸಿಗೆ ರೆಡಿಯಾಗುತ್ತಿದೆ. ಎನ್. ಕುಮಾರ್ ನಿರ್ಮಾಣದಲ್ಲಿ, ಎ. ಹರ್ಷ ನಿರ್ದೇಶಿಸಿದ್ದ “ಅಂಜನಿ ಪುತ್ರ” ಮರು ಬಿಡುಗಡೆಗೆ ಸಜ್ಜಾಗಿದೆ.
ತಮಿಳಿನಲ್ಲಿ 2014ರಲ್ಲಿ ವಿಶಾಲ್ ನಟನೆಯಲ್ಲಿ “ಪೂಜೈ” ಶೀರ್ಷಿಕೆಯಡಿ ತೆರೆಕಂಡಿದ್ದ ಸಿನಿಮಾ ಅಲ್ಲಿ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾವನ್ನು 2017ರಲ್ಲಿ ಕನ್ನಡಕ್ಕೆ ತಂದು ಎ. ಹರ್ಷ “ಅಂಜನಿ ಪುತ್ರ” ಎಂಬ ಟೈಟಲ್ ಇರಿಸಿ ಚಿತ್ರಮಾಡಿ ಬಿಡುಕಡೆ ಕಾಣಿಸಿದ್ದರು. ಹಳೆಯ ಸಿನಿಮಾ ಆಗಿದ್ದಕ್ಕೋ ಅಥವಾ ತಮಿಳು ಸೊಗಡಿನ ಚಿತ್ರವಾಗಿದ್ದಕ್ಕೋ ಏನೋ; ಚಿತ್ರ ಮಕಾಡೆ ಮಲಗಿತ್ತು. ಪುನೀತ್ ರಾಜ್ ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣ ಸೇರಿದಂತೆ ಬಹು ದೊಡ್ಡ ತಾರಾ ಬಳಗವಿದ್ದರೂ, ವರ್ಕೌಟ್ ಆಗಿರಲಿಲ್ಲ. ಆದರೆ ರವಿ ಬಸ್ರೂರು ಸಂಗೀತದಲ್ಲಿ ಪ್ರಮೋದ್ ಮರವಂತೆ ಸಾಹಿತ್ಯದಲ್ಲಿ “ಚಂದ-ಚಂದ ಚಂದ- ಚಂದ ನನ್ ಹೆಂಡ್ತಿ..” ಹಾಡು ಮಾತ್ರ ಸೂಪರ್ ಹಿಟ್ ಆಗಿತ್ತು.
ಇದೀಗ ಪುನೀತ್ ರಾಜ್ ಕುಮಾರ್ ನೆನಪಲ್ಲಿ ಈ ಸಿನಿಮಾ ಮತ್ತೆ ಬಿಡುಗಡೆ ಕಾಣುತ್ತಿದೆ. ಈ ಬಾರಿ ಪ್ರೇಕ್ಷಕ ಏನು ಮಾಡಿಯಾನು? ಎಂಬುದಕ್ಕೆ ಮೇ ಹತ್ತರವರೆಗೂ ಕಾಯಬೇಕು.
ಅಂದಹಾಗೆ, ಚಿತ್ರ ಮೇ 10ಕ್ಕೆ ಬಿಡುಗಡೆಯಾಗುತ್ತಿದೆ. ಪುನೀತ್ ರಾಜ್ ಕುಮಾರರನ್ನು ಮತ್ತೆ ತೆರೆಯಲ್ಲಿ ನೋಡಿ ಪುನೀತರಾಗಲು ಚಿತ್ರಮಂದಿರದತ್ತ ತೆರಳಲಡ್ಡಿಯಿಲ್ಲ. ಜೈ ಪುನೀತ್!