ಬೆಂಗಳೂರು: ಒಂದು ಕಾಲಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನೇ ಸೋಲಿಸಿದ್ದ ವಿಪ ಸದಸ್ಯೆ ಡಾ. ತೇಜಸ್ವಿನಿ ಗೌಡ ಅವಧಿಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೂರು ತಿಂಗಳ ಮುಂಚೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ವೇಳೆ ಇದು ಅಚ್ಚರಿಗೆ ಕಾರಣವಾಗಿದೆ. ತೇಜಸ್ವಿನಿಗೌಡ ಅವರು ತಮ್ಮ ರಾಜೀನಾಮೆ ಪತ್ರವನ್ನು ಇಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸಲ್ಲಿಕೆ ಮಾಡಿದ್ದಾರೆ. ಇದು ಅಂಗೀಕಾರಗೊಂಡಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿಯವರು, “ಬಿಜೆಪಿ ಎಂಎಲ್‌ಸಿ ತೇಜಸ್ವಿನಿ ಗೌಡ ಇಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದೇನೆ. ಸ್ವ – ಇಚ್ಚೆಯಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಅವರ ಅವಧಿ ಜೂನ್ ವರೆಗೆ ಇತ್ತು” ಎಂದು ಹೇಳಿದ್ದಾರೆ.
ತೇಜಸ್ವಿನಿ ಗೌಡ ಬೆಂಗಳೂರು ಗ್ರಾಮಾಂತರ ಅಥವಾ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬೆಂಗಳೂರು ಗ್ರಾಮಾಂತರದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ತಮಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಕೂಡ ಇವರಿಗಿತ್ತು. ಆದರೆ, ಡಾ. ಸಿ.ಎನ್. ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಹೀಗಾಗಿ ತೇಜಸ್ವಿನಿ ಬೇಸರಗೊಂಡಿದ್ದರು ಎನ್ನಲಾಗಿದೆ. ಬಿಜೆಪಿ ವಕ್ತಾರರಾಗಿದ್ದ ಅವರು ಪಕ್ಷದ ನಿಲುವುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಬರುತ್ತಿದ್ದರು. ನೇರವಾಗಿ ಹಾಗೂ ಹರಿತವಾಗಿ ಮಾತನಾಡುತ್ತಿದ್ದ ತೇಜಸ್ವಿನಿ ಗೌಡರವರ ಹಠಾತ್ ರಾಜೀನಾಮೆಯು, ಸದ್ಯ ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ತೊಂದರೆ ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.