ಲಕ್ನೋ: ಪತಿ, ಪತ್ನಿಯನ್ನು ಚಿತ್ರಹಿಂಸೆ ನೀಡಿರುವ ಸುದ್ದಿಯನ್ನು ನಾವು ಕೇಳಿರುತ್ತೇವೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಪತ್ನಿಯೇ ಪತಿಗೆ ಚಿತ್ರಹಿಂಸೆ ಕೊಟ್ಟು ಸಿಗರೇಟ್ ನಿಂದ ಖಾಸಗಿ ಅಂಗಕ್ಕೆ ಚುಚ್ಚಿರುವ ಘಟನೆ ನಡೆದಿದೆ.
ಉತ್ತರಪ್ರದೇಶದ (Uttar Pradesh) ಸಿಯೋಹರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಪತ್ನಿಯನ್ನು ಮೆಹರ್ (30) ಎನ್ನಲಾಗಿದೆ. ಪತಿಯನ್ನು ಮನ್ನನ್ ಜೈದಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ ತನ್ನ ಪತಿಯ ಮೇಲೆ ಈ ರೀತಿಯ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಪತಿ ಹಾಗೂ ಪತ್ನಿಯ ಮೇಲೆ ಹೊಂದಾಣಿಕೆ ಇಲ್ಲದ ಹಿನ್ನೆಲೆಯಲ್ಲಿ ಇಬ್ಬರು ಬೇರೆಬೇರೆಯಾಗಿಯೇ ವಾಸಿಸುತ್ತಿದ್ದರು. ದೂರವಾದ ನಂತರ ಪತ್ನಿ ಮದ್ಯಪಾನ ಹಾಗೂ ದೂಮ್ರಪಾನದ ದಾಸಳಾಗಿದ್ದಾಳೆ ಎನ್ನಲಾಗಿದೆ.
ಈ ವೇಳೆ ಪತಿಯನ್ನು ನಿಂದಿಸಿ, ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಸಿದ್ದಾಳೆ. ಕೈ ಕಾಲು ಕಟ್ಟಿ ಖಾಸಗಿ ಅಂಗಕ್ಕೆ ಸಿಗರೇಟ್ ಚುಚ್ಚಿದ್ದಾಳೆ ಎಂದು ಪತಿ ಆರೋಪಿಸಿ, ಪತ್ನಿ ನೀಡಿರುವ ಚಿತ್ರಹಿಂಸೆಯ ವಿಡಿಯೋವನ್ನು ಪೊಲೀಸರಿಗೆ ನೀಡಿದ್ದಾರೆ. ಸದ್ಯ ಪತ್ನಿಯ ಕಿರುಕುಳದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣದ ಸಂಬಂಧ ಪೊಲೀಸರು ಮಹಿಳೆಯನ್ನು ಬಂಧಿಸಿ, ದೂರು ದಾಖಲಿಸಿಕೊಂಡಿದ್ದಾರೆ.