*ಭಾರತಕ್ಕೀಗ ಹಂಟರ್-ಕಿಲ್ಲರ್ ಸಬ್‌ಮರೀನ್ ಐಎನ್ಎಸ್ ವಘಶೀರ್, ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಶಕ್ತಿ*
ಮುಂಬೈ: ದೇಶದ ನೌಕಾಪಡೆಗೆ ಈಗ ಮತ್ತಷ್ಟು ಬಲ ಬಂದಿದ್ದು, ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಘಶೀರ್ ಎಂಬ ಮೂರು ಮುಂಚೂಣಿ ಯುದ್ಧ ನೌಕೆಗಳನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿಯವವರು ಮುಂಬೈನಲ್ಲಿ ಲೋಕಾರ್ಪಣೆ ಮಾಡಿದ್ದಾರೆ.
‘ಹಂಟರ್-ಕಿಲ್ಲರ್’ ಜಲಾಂತರ್ಗಾಮಿ ಐಎನ್‌ಎಸ್ ವಘಶೀರ್, ನಿರ್ದೇಶಿತ ಕ್ಷಿಪಣಿ ನಾಶಕ ನೌಕೆ ಐಎನ್ಎಸ್ ಸೂರತ್ ಮತ್ತು ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ನೀಲಗಿರಿಯ ಸೇರ್ಪಡೆಯು ನೌಕಾಪಡೆಯ ಶಕ್ತಿಯನ್ನು ಹೆಚ್ಚಿಸಿದ್ದು, ನೆರೆಯ ಚೀನಾ ಮತ್ತು ಪಾಕಿಸ್ತಾನಗಳ ದುಸ್ಸಾಹಸಗಳಿಗೆ ತಕ್ಕ ಪಾಠ ಕಲಿಸಲು ನೆರವಾಗಲಿವೆ.
ಈ ತ್ರಿಶಕ್ತಿಗಳ ಲೋಕಾರ್ಪಣೆ ಮಾಡಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, “ಭಾರತವು ಈಗ ಜಗತ್ತಿನ ಪ್ರಮುಖ ನೌಕಾಶಕ್ತಿಯಾಗಿ ರೂಪುಗೊಳ್ಳುತ್ತಿದೆ. ನೌಕಾ ನಿರ್ಮಾಣದಂಥ ಕ್ಷೇತ್ರಗಳ ವಿಸ್ತರಣೆಯು ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಪೂರಕವಾಗಿದೆ. ಛತ್ರಪತಿ ಶಿವಾಜಿ ಮಹರಾಜ್ ಅವರು ಭಾರತೀಯ ನೌಕಾಪಡೆಗೆ ಹೊಸ ಶಕ್ತಿ ಮತ್ತು ಹೊಸ ದೃಷ್ಟಿಕೋನವನ್ನು ಕಲ್ಪಿಸಿದ್ದಾರೆ. ಈಗ ಅವರದ್ದೇ ನೆಲದಲ್ಲಿ ನಾವು 21ನೇ ಶತಮಾನದ ನೌಕಾಪಡೆಗೆ ಹೆಚ್ಚಿನ ಶಕ್ತಿಯನ್ನು ತಂದುಕೊಡುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಿಟ್ಟಿದ್ದೇವೆ. ಡೆಸ್ಟ್ರಾಯರ್, ಫ್ರಿಗೇಟ್ ಮತ್ತು ಸಬ್ ಮರೀನ್ ಏಕಕಾಲಕ್ಕೆ ನೌಕಾಪಡೆಗೆ ಸೇರ್ಪಡೆಯಾಗುತ್ತಿರುವುದು ಇದೇ ಮೊದಲು” ಎಂದು ಹೇಳಿದ್ದಾರೆ.
ಐಎನ್ಎಸ್ ವಘಶೀರ್:
ಐಎನ್ಎಸ್ ವಘಶೀರ್ ಎನ್ನುವುದು ಪಿ75 ಸ್ಕಾರ್ಪೀನ್ ಯೋಜನೆಯ 6ನೇ ಮತ್ತು ಅಂತಿಮ ಜಲಾಂತರ್ಗಾಮಿಯಾಗಿದೆ. ಇದನ್ನು ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಐಎನ್ಎಸ್ ವಘಶೀರ್ ಅನ್ನು ‘ಹಂಟರ್-ಕಿಲ್ಲರ್ ಸಬ್‌ಮರೀನ್’ (ಬೇಟೆಯಾಡಿ ಹತ್ಯೆಗೈಯ್ಯುವ ಜಲಾಂತರ್ಗಾಮಿ) ಎಂದೂ ಕರೆಯಲಾಗುತ್ತದೆ. ಇದರಲ್ಲಿ ಟಾರ್ಪಿಡೋಗಳು, ನೌಕೆ ನಿಗ್ರಹ ಕ್ಷಿಪಣಿಗಳು ಇರಲಿದ್ದು, ಗುಪ್ತಚರ ಮಾಹಿತಿ ಸಂಗ್ರಹ ಮತ್ತು ನೆಲಬಾಂಬುಗಳನ್ನು ಹುದುಗಿಸಿಡುವ ಸಾಮರ್ಥ್ಯವನ್ನೂ ಇವು ಹೊಂದಿವೆ.
ಐಎನ್ಎಸ್ ಸೂರತ್:
ಇದೊಂದು ನಿರ್ದೇಶಿಕ ಕ್ಷಿಪಣಿ ನಾಶಕ ನೌಕೆ. ಇದು ಜಗತ್ತಿನ ಅತಿದೊಡ್ಡ ಮತ್ತು ಅತ್ಯಾಧುನಿಕ ಡೆಸ್ಟ್ರಾಯರ್. ಇದನ್ನು ಶೇ.75ರಷ್ಟು ದೇಶೀಯವಾಗಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಸೆನ್ಸರ್ ಗಳು ಇದರಲ್ಲಿರಲಿವೆ. ಸಮುದ್ರದಲ್ಲಿನ ಪರೀಕ್ಷೆ ವೇಳೆ ಇದರ ವೇಗ ಗಂಟೆಗೆ 56 ಕಿ.ಮೀ. ಇತ್ತು.
ಐಎನ್ಎಸ್ ನೀಲಗಿರಿ:
ಇದು ಪಿ17ಎ ಸ್ಟೆಲ್ತ್ ಫ್ರಿಗೇಟ್ ಪ್ರಾಜೆಕ್ಟ್‌ನ ಮೊದಲ ನೌಕೆಯಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ಇದನ್ನು ವಿನ್ಯಾಸಗೊಳಿಸಿದೆ. ಸೂಪರ್ ಸಾನಿಕ್ ಕ್ಷಿಪಣಿ ವ್ಯವಸ್ಥೆ, 76 ಎಂಎಂ ಮೇಲ್ದರ್ಜೆಗೇರಿಸಿದ ಗನ್, ಕ್ಷಿಪ್ರ ಫೈರಿಂಗ್ ಸಾಮರ್ಥ್ಯ ಶಸ್ತ್ರಾಸ್ತ್ರ ವ್ಯವಸ್ಥೆ ಇದರಲ್ಲಿವೆ.