“ಸ್ವರ್ಣಗಂಗಾ ಫಿಲಂಸ್” ಲಾಂಚನದಡಿ ಬಿ.ಎಸ್.ಚಂದ್ರಶೇಖರ್ ನಿರ್ಮಿಸಿರುವ, ರವೀಂದ್ರ ವಂಶಿ ನಿರ್ದೇಶನದಲ್ಲಿ ತಯಾರಾದ “ನೈಟ್ ಕರ್ಪ್ಯೂ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ಎಪ್ರೀಲ್ ಹನ್ನೆರಡಕ್ಕೆ ಬಿಡುಗಡೆಯಾಗುತ್ತಿದ್ದು, “ಆಕ್ಷನ್ ಕ್ವೀನ್ ಮಾಲಾಶ್ರೀ” ನಟನೆಯ ಚಿತ್ರ ಎಂಬ ಬಹು ನಿರೀಕ್ಷೆಯೊಂದಿಗೆ ಅದ್ಧೂರಿಯಾಗಿ ತೆರೆ ಏರುತ್ತಿದೆ.
ಪುಟಾಣಿ ಸಫಾರಿ, ಮಠ-2, ವಾಸಂತಿ ನಲಿದಾಗ ಸಿನಿಮಾಗಳನ್ನ ನಿರ್ದೇಶಿಸಿದ್ದ ‘ರವೀಂದ್ರ ವಂಶಿ’ ಈ ಬಾರಿ ವಿಶೇಷವಾದ ಕಥೆಯೊಂದಿಗೆ ಚಿತ್ರ ತಯಾರಿಸಿದ್ದು, ವೈದ್ಯಲೋಕದ ಅನಾಹುತಕಾರಿ “ನೈಜಘಟನೆ”ಯನ್ನು ಈ ಚಿತ್ರ ಹೊತ್ತು ತರುತ್ತಿದೆ. ಚಿತ್ರದಲ್ಲಿ ನಟಿ ಮಾಲಾಶ್ರೀ, ರಂಜನಿ ರಾಘವನ್, ರಂಘಾಯಣ ರಘು, ಪ್ರಮೋದ್ ಶೆಟ್ಟಿ, ಸಾಧುಕೋಕಿಲ ಸೇರಿದಂತೆ ನುರಿತ ಕಲಾವಿದರೇ ತುಂಬಿಕೊಂಡಿದ್ದಾರೆ.
ನಿರ್ಮಾಪಕ ಚಂದ್ರಶೇಖರ್ ಈ ಹಿಂದೆ ಇದೇ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶನದ ‘ಪುಟಾಣಿ ಸಫಾರಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಅದು ಮಕ್ಕಳ ಚಿತ್ರವಾದರೂ, ಚಿತ್ರ ಬಿಡುಗಡೆಕಂಡು ಸಣ್ಣದಾಗಿ ಸದ್ದು ಮಾಡಿಕೊಂಡಿತ್ತು. ಅದೇ ಆಧಾರದಲ್ಲಿ ಇದೀಗ ಮತ್ತೆ ಈ ನಿರ್ದೇಶಕ-ನಿರ್ಮಾಪಕರ ಜೋಡಿ ‘ನೈಟ್ ಕರ್ಫ್ಯೂ’ ಮೂಲಕ ಒಂದಾಗಿದೆ.
ಇದು ನೈಜ ಘಟನೆ ಆಧಾರಿತ ಸಿನಿಮಾವಾದ್ದರಿಂದ ಅಲ್ಲೊಂದು ವೀಶೇಷತೆ ಇದ್ದೇ ಇದೆ ಎನ್ನುತ್ತಾರೆ ನಿರ್ಮಾಪಕ ಚಂದ್ರಶೇಖರ್. ಮುಂದುವರೆದ ಜಗತ್ತಲ್ಲಿ, ದಂಧೆಯ ಅಡ್ಡೆಯಂತಾಗಿರುವ ಆಸ್ಪತ್ರೆಗಳು, ಸಮಯ ಸಾಧಕ ವೈದ್ಯರುಗಳು ಹಾಗೂ ಪರಿಸ್ಥಿತಿ ಅನಿವಾರ್ಯತೆಯ ಲಾಭ ಪಡೆವ ದುಷ್ಟ ಜನರುಗಳು, ಸಮಾಜದ ತುರ್ತು ಸಂದರ್ಭದಲ್ಲಿ ಆಡಿದ ಅಸಲಿ ಆಟಗಳ ಬಗೆಗಿನ ನೈಜ ಘಟನೆಯನ್ನು ಆಧಾರವಾಗಿಸಿಕೊಂಡು ಚಿತ್ರ ಕಟ್ಟಿಕೊಟ್ಟಿದ್ದು ಪ್ರೇಕ್ಷಕರಿಗೆ ಹಿಡಿಸಲಿದೆ ಎನ್ನುತ್ತಾರೆ ನಿರ್ದೇಶಕ ರವೀಂದ್ರ ವಂಶಿ.
ಹಾಗೆ ನೋಡಿದರೇ, ಈ ವಾರ ಅಂಥ ಪೈಪೋಟಿಯ ಸ್ಟಾರ್ ಸಿನಿಮಾಗಳು ಇಲ್ಲದ ಕಾರಣವೂ ಸೇರಿದಂತೆ, ಬಿಡಗಡೆ ಹೊಂದುತ್ತಿರುವ ಸಮಯವಂತೂ, ಚಿತ್ರಕ್ಕೆ ಪೂರಕವಾಗಿದೆ. ಅಂದುಕೊಂಡಂತೆಯೇ ಚಿತ್ರ ಮೂಡಿ ಬಂದಿದ್ದು, ಜನಮನ ಗೆದ್ದರೇ, ನೈಜ ಘಟನೆಯ “ನೈಟ್ ಕರ್ಫ್ಯೂ” ಗೆಲುವಿನ ನಗೆ ಬೀರಲಿದೆ.
