ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ಜರುಗಲಿದೆ. ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
102 ಕ್ಷೇತ್ರಗಳ ಪೈಕಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6ರ ವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. 1.87 ಲಕ್ಷ ಮತಗಟ್ಟೆಗಳನ್ನು ನಿರ್ಮಿಸಿದ್ದು, ಬರೋಬ್ಬರಿ 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ.
8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿಗಳು ಸೇರಿ ಒಟ್ಟು 16.63 ಕೋಟಿ ಮತದಾರರು ಶುಕ್ರವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೊದಲ ಹಂತದಲ್ಲಿ 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೊದಲ ಹಂತದಲ್ಲಿ ತಮಿಳುನಾಡಿನ ಎಲ್ಲ 39, ಉತ್ತರಾಖಂಡದ ಎಲ್ಲ 5, ಅರುಣಾಚಲ ಪ್ರದೇಶ, ಮಣಿಪುರ, ಮೇಘಲಯದ ಎಲ್ಲ 2 ಸ್ಥಾನಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ರಾಜಸ್ಥಾನದ 25 ಸ್ಥಾನಗಳಲ್ಲಿ 12 ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ 6, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 5, ಅಸ್ಸಾಂ 14 ಸ್ಥಾನಗಳಲ್ಲಿ 5, ಬಿಹಾರದ 40 ಸ್ಥಾನಗಳಲ್ಲಿ 4, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ 1 ಮತ್ತು ಪುದುಚೆರಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿವೆ.