ಮೊನ್ನೆ ತಡರಾತ್ರಿ ಹೃದಯಾಘಾತದಿಂದ ಅಸುನೀಗಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಂತಿಮ ದರ್ಶನವನ್ನು, ಮೈಸೂರಿನ ಅಶೋಕಪುರಂನ ಎನ್ಟಿಎನ್ ಶಾಲಾ ಆವರಣದಲ್ಲಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಶ್ರೀನಿವಾಸ್ ಪ್ರಸಾದ್ ಜೊತೆಗಿನ ತಮ್ಮ ರಾಜಕೀಯ ಒಡನಾಟವನ್ನು ಮಾಧ್ಯಮದ ಜೊತೆ ಹಂಚಿಕೊಂಡರು.
“ವಯೋಸಹಜ ಖಾಯಿಲೆಯಿಂದ ಆಸ್ಪತ್ರೆ ಸೇರಿದ್ದ ಶ್ರೀನಿವಾಸ್ ಪ್ರಸಾದ್ ಗುಣಮುಖವಾಗಿ ಹಿಂತಿರುಗುತ್ತಾರೆ ಎಂದುಕೊಂಡಿದ್ದೆ, ಆದರೆ ವಿಧಿ ಲಿಖಿತ ಬೇರೆ ಇತ್ತು” ಎಂದು ಸಾವಿಗೆ ಸಂತಾಪ ಸೂಚಿಸಿದರು.
ಇನ್ನು ಅವರ ಜೊತೆಗಿನ ಒಡನಾಟದ ಬಗ್ಗೆ ಮಾತಾಡಿದ ಸಿಎಂ “ಶ್ರೀನಿವಾಸ್ ಪ್ರಸಾದ್ ಸಂಸದರಾಗಿ ಯೂತ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು. ನಾನು ಮತ್ತು ವಿಶ್ವನಾಥ್ ಕಾರ್ಯದರ್ಶಿಗಳಾಗಿದ್ವಿ. ನಾನು ಮೊದಲ ಬಾರಿಗೆ ಶಾಸಕನಾಗಲು ಟಿಕೇಟು ಕೊಡಿಸಿ ಜೊತೆ ನಿಂತಿದ್ದರು. ಮುಂದೊಂದು ದಿನ ನಾನು ಸಚಿವನಾಗಲು ಹೋರಾಟಕೊಟ್ಟವರು. ರಾಜಕಾರಣದಲ್ಲಿ ಸದಾ ನನ್ನ ಪರವಾಗಿದ್ದವರು” ಎಂದು ಆತ್ಮೀಯತೆ ತೋಡಿಕೊಂಡರು. ಹಾಗೆಯೇ, “ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀನಿವಾಸ್ ಪ್ರಸಾದ್ ಅವರಿಗೆ ಗೌರವ ವಿದಾಯ ಹೇಳಲು ವ್ಯೆವಸ್ಥೆ ಮಾಡಲಾಗಿದೆ.” ಎಂದರು.