ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರು ದೇಶದ ಆಗರ್ಭ ಶ್ರೀಮಂತರೆನಿಸಿದ್ದಾರೆ. ಲಕ್ಷಾಂತರ ಕೋಟಿ ರೂಪಾಯಿ ವಹಿವಾಟು ಹೊಂದಿರುವ ಇವರ ಕಂಪನಿಯು ಸರ್ಕಾರಕ್ಕೆ ಲಕ್ಷಾಂತರ ಕೋಟಿ ರೂ. ತೆರಿಗೆ ಕಟ್ಟುತ್ತದೆ ಎಂಬುದು ಕೂಡ ಪ್ರಮುಖ ಸಂಗತಿಯಾಗಿದೆ. ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಪ್ರತಿ ವರ್ಷ ದೇಶದ ಒಟ್ಟು ಬಜೆಟ್ ನ ಶೇ.4ರಷ್ಟು ಮೊತ್ತವನ್ನು ಕಾರ್ಪೊರೇಟ್ ತೆರಿಗೆಯಾಗಿ ಸರ್ಕಾರಕ್ಕೆ ಪಾವತಿಸುತ್ತದೆ ಎಂದು ತಿಳಿದುಬಂದಿದೆ.
2023-24ನೇ ಹಣಕಾಸು ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಬರೋಬ್ಬರಿ 1.86 ಲಕ್ಷ ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ಕಾರ್ಪೊರೇಟ್ ತೆರಿಗೆಯಾಗಿ ಪಾವತಿಸಿದೆ. ಅಷ್ಟೇ ಅಲ್ಲ, 2022-23ನೇ ಸಾಲಿನಲ್ಲಿ 1.77 ಲಕ್ಷ ಕೋಟಿ ರೂ. ತೆರಿಗೆ ಪಾವತಿಸಿದೆ. ಒಂದು ವರ್ಷದ ಅವಧಿಯಲ್ಲೇ 9 ಸಾವಿರ ಕೋಟಿ ರೂ. ಹೆಚ್ಚು ತೆರಿಗೆ ಪಾವತಿಸಿದಂತಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮಾರುಕಟ್ಟೆ ಬಂಡವಾಳ ಮೊತ್ತವೂ ಇದೇ ಮೊದಲ ಬಾರಿಗೆ 20 ಲಕ್ಷ ಕೋಟಿ ರೂ. ದಾಟಿದೆ. ಇದರೊಂದಿಗೆ ದೇಶದಲ್ಲೇ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಮೊದಲ ಕಂಪನಿ ಎನಿಸಿದೆ. ಅಷ್ಟೇ ಅಲ್ಲ, ವಿಶ್ವದಲ್ಲೇ ಬೃಹತ್ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಗೆ 48ನೇ ಸ್ಥಾನ ಇದೆ.
ಮುಕೇಶ್ ಅಂಬಾನಿ ಅವರು ದೇಶದಲ್ಲೇ ನಂಬರ್ 1 ಶ್ರೀಮಂತರಾಗಿದ್ದಾರೆ. ನಂತರದ ಸ್ಥಾನದಲ್ಲಿ ಗೌತಮ್ ಅದಾನಿ ಇದ್ದಾರೆ. ಮುಕೇಶ್ ಅಂಬಾನಿ ಅವರ ಒಟ್ಟು ಆಸ್ತಿಯ ಮೌಲ್ಯವು 9 ಲಕ್ಷ ಕೋಟಿ ರೂ. ದಾಟಿದೆ. ಕಂಪನಿಯ ಲಾಭವು ವರ್ಷದಿಂದ ವರ್ಷಕ್ಕೆ ಶೇ.27ರಷ್ಟು ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.