ಕೋಲಾರ: ದೇವಸ್ಥಾನದ ಹಣದಿಂದ ಶಾಲೆ ನಿರ್ಮಾಣ ಮಾಡಿರುವ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದೆ.
ಜಿಲ್ಲೆಯ ಮಾಲೂರು ಪಟ್ಟಣದ ಕುಂಬಾರಪಾಳ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾರಿಕಾಂಬ ದೇವಿಯ ಕಾಣಿಕೆಯಿಂದ ನಿರ್ಮಾಣ ಮಾಡಲಾಗಿದೆ. ಈ ದೇವಾಲಯಕ್ಕೆ ಅರ್ಚಕರು ಇಲ್ಲ, ಬಾಗಿಲುಗಳು ಇಲ್ಲ. ದಿನದ 24 ಗಂಟೆ ಮಾರಿಕಾಂಬ ದೇವಿಗೆ ಭಕ್ತರಿಂದ ಪೂಜೆ ನಡೆಯುತ್ತಲೇ ಇರುತ್ತದೆ.
ಈ ದೇವಾಲಯವನ್ನು ಕ್ಷೇತ್ರ ಮಾರಿಕಾಂಬ ಟ್ರಸ್ಟ್ ಮೂಲಕ ನಿರ್ವಹಣೆ ಮಾಡುತ್ತದೆ. ದೇವಾಲಯಕ್ಕೆ ಬರುವ ಭಕ್ತರು, ದೇವರಿಗೆ ನೀಡುವ ಕಾಣಿಕೆ ಹಣವನ್ನು ಇಲ್ಲಿನ ಟ್ರಸ್ಟ್, ಭಕ್ತರಿಗಾಗಿಯೇ ಬಳಸಲಾಗುತ್ತಿದೆ. ಹೀಗಾಗಿ ದೇವಸ್ಥಾನದಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಸ್ಪತ್ರೆಯಲ್ಲಿ ಐಸಿಯು ವಾರ್ಡ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರು, ನಿತ್ಯ ಅನ್ನ ದಾಸೋಹ ಸೇರಿದಂತೆ ಹಲವು ಕಾರ್ಯಗಳು ನಡೆಯುತ್ತಿವೆ.
ದೇವಾಲಯ ಟ್ರಸ್ಟ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಅವನತಿ ಹಾದಿಯಲ್ಲಿದ್ದ ಮಾಲೂರು ಪಟ್ಟಣದ ಕುಂಬಾರಪಾಳ್ಯದ ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯಾಗಿ ನಿರ್ಮಾಣ ಮಾಡಿದೆ. 75 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಹೈಟೆಕ್ ಶಾಲೆಯನ್ನೇ ನಿರ್ಮಾಣ ಮಾಡಲಾಗಿದೆ.