ಜೈಲಿನಲ್ಲಿಯೇ ಕುಳಿತು ಎರಡು ಸರ್ಕಾರಿ ಆದೇಶಗಳನ್ನು ಹೊರಡಿಸಿದ್ದಾರೆ. ತಾನು ಪ್ರಮಾಣಿಕ ಅನ್ನೋದನ್ನ ದೆಹಲಿ ಜನರಿಗೆ ತೋರಿಸುವ ಯತ್ನ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಯಾವೊಬ್ಬ ಸಿಎಂ ಕೂಡ ಜೈಲಿನಲ್ಲಿ ಕುಳಿತು ದರ್ಬಾರ್ ನಡೆಸಿರಲಿಲ್ಲ. ಯಾವುದೇ ಆರೋಪ ಕೇಳಿ ಬಂದಾಗ ಮೊದಲು ರಾಜೀನಾಮೆ ನೀಡ್ತಾ ಇದ್ರು. ಆನಂತರ ಅದರ ಸತ್ಯಾಸತ್ಯತೆ ಕುರಿತು ಹೋರಾಟ ನಡೆಸುತ್ತಿದ್ದರು. ಆದರೆ, ಈ ವ್ಯಕ್ತಿ ಮಾತ್ರ ಜೈಲಿನಿಂದಲೇ ಸರ್ಕಾರ ನಡೆಸುವ ಉದ್ಧಟತನ ತೋರಿದ್ದಾರೆ. ಇದರ ಮಧ್ಯೆ ಈಗ ಅವರ ಮೇಲೆ ಮತ್ತೊಂದು ದೊಡ್ಡ ಹಗರಣದ ಆರೋಪ ಕೇಳಿ ಬಂದಿದೆ.
ಭ್ರಷ್ಟಾಚಾರದ ಆರೋಪ ಆಯ್ತು. ಈಗ ದೇಶದ್ರೋಹದ ಆರೋಪವೂ ಕೇಜ್ರಿವಾಲ್ ವಿರುದ್ಧ ಕೇಳಿಬಂದಿದೆ. ಅದೂ ಸಾಮಾನ್ಯದ್ದಲ್ಲ. ಖಲಿಸ್ತಾನಿ ಪ್ರತ್ಯೇಕತಾವಾದಿಗಳೊಂದಿಗೆ ನಂಟು ಹೊಂದಿದ್ದಾರೆಂಬ ಗಂಭೀರ ಆರೋಪ. ಕೆನಡಾದ ಖಲಿಸ್ತಾನಿ ಲಾಬಿಯಿಂದ ಆಮ್ ಆದ್ಮಿ ಪಕ್ಷಕ್ಕೆ 2014ರಿಂದ 2022ರವರೆಗೆ ಬರೋಬ್ಬರಿ 133.54 ಕೋಟಿ ರೂ.ಗಳ ಆರ್ಥಿಕ ನೆರವು ಸಿಕ್ಕಿದೆ ಅನ್ನೋ ಆರೋಪ ನಿಜಕ್ಕೂ ದೇಶದ ಜನರಿಗೆ ಶಾಕ್‌ನೀಡಿದೆ. ಈ ಆರೋಪ ಮಾಡಿರೋದು ಬೇರಾರೂ ಅಲ್ಲ. ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್. ಆತ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.
1993ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಯಾಗಿದ್ದ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ನನ್ನು ಬಿಡುಗಡೆ ಮಾಡಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿಧಿಗೆ ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾನೆ. ಈ ಬಾಂಬ್ ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿ, 31 ಜನ ಗಾಯಗೊಂಡಿದ್ದರು. ಪನ್ನು, ಈ ರೀತಿ ಆರೋಪ ಮಾಡಿದ್ದು ಇದೇ ಮೊದಲಲ್ಲ. ಜನವರಿಯಲ್ಲಿ, ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಇಬ್ಬರೂ ಯುಎಸ್ ಮತ್ತು ಕೆನಡಾದಲ್ಲಿ ಖಾಲಿಸ್ತಾನ್ ಬೆಂಬಲಿಗರಿಂದ 6 ಮಿಲಿಯನ್ ಡಾಲರ್ ದೇಣಿಗೆ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದ.
ಪನ್ನು ಹೇಳಿಕೆಯನ್ನು ಕೆಲವರು ಅಲ್ಲಗಳೆಯಬಹುದು. ಅವನೊಬ್ಬ ಉಗ್ರಗಾಮಿ. ಅವನು ದೇಶ ಒಡೆದು, ರಕ್ತಪಾತ ನೋಡಬೇಕೆಂದು ಬಯಸಿದವನು ಎಂದು ಹಲವರು ಆರೋಪವನ್ನು ತಳ್ಳಿ ಹಾಕಬಹುದು. ಆದರೆ, ಅರವಿಂದ್ ಕೇಜ್ರಿವಾಲ್ ಆಪ್ತ ಕುಮಾರ್ ವಿಶ್ವಾಸ್ ಈ ಹಿಂದೆಯೇ ಈ ಆರೋಪ ಮಾಡಿದ್ದನ್ನು ನಾವು ಇಲ್ಲಿ ಮರೆಯಬಾರದು.
ಪಂಜಾಬ್ ವಿಧಾನಸಭೆ ಚುನಾವಣೆಗೂ ಮೊದಲು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯ ಹಾಗೂ ಅಣ್ಣ ಹಜಾರೆಯ ಜೊತೆ ಸತ್ಯಾಗ್ರಹ ಮಾಡಿದ್ದ ಡಾ. ಕುಮಾರ್ ವಿಶ್ವಾಸ್ ಪ್ರಪ್ರಥಮರಾಗಿ ಈ ಬಗ್ಗೆ ಅಪಸ್ವರ ಎತ್ತಿದ್ದರು. ಪಕ್ಷದ ನಾಯಕ ಕೇಜ್ರಿವಾಲ್ ಗೆ ಖಾಲಿಸ್ತಾನ್ ಸಮರ್ಥಕರ ಜೊತೆ ಸಂಬಂಧ ಇದೆ. ಅವರ ಬಳಿ ಹಣ ಪಡೆದಿದ್ದಾರೆ. ಅದನ್ನು ನಾನು ವಿರೋಧಿಸಿದ್ದೆ. ನಾನು ಖಲಿಸ್ತಾನ ಎಂಬ ಹೊಸ ದೇಶದ ಪ್ರಧಾನಿಯಾಗಲು ಬಯಸುತ್ತೇನೆ ಎಂದು ಆಗ ಕೇಜ್ರಿವಾಲ್ ಉಡಾಫೆಯ ಮಾತಾಡಿದ್ರು. ಹೀಗಾಗಿಯೇ ನಾವು ಪಕ್ಷ ಬಿಟ್ಟೆವು ಎಂದು ಆರೋಪಿಸಿದ್ದರು. ಕುಮಾರ್ ವಿಶ್ವಾಸ್ ಬೇರೆಯಾರೂ ಅಲ್ಲ, ಅಣ್ಣಾ ಹಜಾರೆ ಲೋಕಪಾಲ್ ಮಸೂದೆ ಜಾರಿಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿದ್ದ ಪ್ರಮುಖ ವ್ಯಕ್ತಿ. ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆ ಅವರ ಬೆನ್ನೆಲುಬಾಗಿದ್ದರೆ, ಕೇಜ್ರಿವಾಲ್ ಬೆನ್ನೆಲುಬಾಗಿ ಕುಮಾರ್ ವಿಶ್ವಾಸ ಇದ್ದರು. ಪರಮಾಪ್ತ ಹಾಗೂ ಕೇಜ್ರಿವಾಲ್ ಅವರ ನಡೆ-ನುಡಿ- ಕೃತಿಗಳನ್ನು ಕಣ್ಣಾರೆ ಕಂಡ ವ್ಯಕ್ಯಿಯೇ ಇಂತಹ ಗಂಭೀರ ಆರೋಪ ಮಾಡಿದ್ದನ್ನು ಹಗುರವಾಗಿ ಪರಿಗಣಿಸಬೇಕಿಲ್ಲ. ಅದರಲ್ಲಿಯೂ ಪನ್ನುಗಿಂತ ಮೊದಲು ಕುಮಾರ್ ವಿಶ್ವಾಸ್ ಈ ಆರೋಪ ಮಾಡಿದ್ದಾರೆ ಎಂಬುವುದನ್ನು ಮರೆಯಬಾರದು.
ಹಾಗಾದರೆ, ನಿಜವಾಗಿಯೂ ಕೇಜ್ರಿವಾಲ್ ಗೆ ಖಲಿಸ್ತಾನ್ ಪ್ರಧಾನಿಯಾಗಬೇಕೆಂಬ ಕನಸು ಇದೆಯೇ? ಈಗಾಗಲೇ ಕೇಜ್ರಿವಾಲ್ ದೆಹಲಿ ಅಬಕಾರಿ ನೀತಿ “ಹಗರಣ” ದಲ್ಲಿ ಕೇಜ್ರಿವಾಲ್ ಬಂಧನದ ನಂತರ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. 28ರವರೆಗೆ ಇಡಿ ಕಸ್ಟಡಿಯಲ್ಲಿರಲಿದ್ದಾರೆ. ಬಂಧನದಲ್ಲಿದ್ದರೂ ಸಿಎಂ ಸ್ಥಾನದ ಮಮಕಾರ ತೊರೆದಿಲ್ಲ. ಜೈಲಿನಲ್ಲಿಯೇ ಕುಳಿತು ಎರಡು ವಿಷಯಗಳನ್ನು ಜಾರಿಗೊಳಿಸಿದ್ದಾರೆ. ಅಬಕಾರಿ ನೀತಿ ‘ಹಗರಣ’ದ ಸಂದರ್ಭದಲ್ಲಿ ಕೇಜ್ರಿವಾಲ್ ಬಳಸಿದ್ದ ಫೋನ್ ‘ಕಾಣೆಯಾಗಿದೆ’ ಎಂದು ಕೂಡ ಇಡಿ ಹೇಳುತ್ತಿದೆ. ಹಾಗಾದರೆ, ಆ ಫೋನ್ ನಲ್ಲಿ ಅಬಕಾರಿ ಹಣದೊಂದಿಗೆ, ಖಲಿಸ್ತಾನ್ ಅಭಿಮಾನ, ಖಲಿಸ್ತಾನ್ ಬೆಂಬಲಿಗರಿಂದ ಹಣ ಪಡೆದ ಕುರಿತ ಮಾಹಿತಿಯೂ ಸಿಗಬಹುದಾ? ಕೇಜ್ರಿವಾಲ್ ದೇಶ ಒಡೆದು ಖಲಿಸ್ತಾನ್ ಪ್ರಧಾನಿ ಆಗೋಕೆ ಹೊರಟಿದ್ದು ಸತ್ಯನಾ? ತನಿಖೆ ಇದನ್ನು ದೇಶದ ಜನತೆಗೆ ತಿಳಿಸಲೇಬೇಕಿದೆ….