ನವದೆಹಲಿ: ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ವಿವಿಧ ಹಗರಣಗಳ ದಾಖಲೆಗಳನ್ನು ಕಳ್ಳತನ ಮಾಡಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಮತ್ತು ಸಹಾಯಕ ಅಧಿಕಾರಿ ವೈವಿವಿಜೆ ರಾಜಶೇಖರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಉತ್ತರಾಖಂಡದ ಅಲ್ಮೋರಾ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಇತ್ತೀಚೆಗಷ್ಟೇ ನ್ಯಾಯಾಲಯವು ಸಂಸ್ಥೆಯೊಂದರ ದೂರು ಸ್ವೀಕರಿಸಿತ್ತು. ಈ ವೇಳೆ ಕೋರ್ಟ್ ಕಾರ್ಯದರ್ಶಿಗಳ ವಿರುದ್ಧ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಕಂದಾಯ ಪೊಲೀಸರಿಗೆ ಸೂಚಿಸಿತ್ತು. ಹೀಗಾಗಿ ಎಫ್ ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಎನ್‌ಜಿಒ ನಡೆಸುತ್ತಿರುವ ಶಾಲೆಗೆ ಅಧಿಕಾರಿಗಳು ನಾಲ್ವರನ್ನು ಕಳುಹಿಸಿದ್ದರು. ಕಾರ್ಯದರ್ಶಿಕಡೆಯವರು ಎಂದು ಹೇಳಿಕೊಂಡ ನಾಲ್ವರು ಎನ್‌ಜಿಒ ಜಂಟಿ ಕಾರ್ಯದರ್ಶಿ ಕಚೇರಿ ಕೊಠಡಿ ಧ್ವಂಸಗೊಳಿಸಿದ್ದರು. ಜೊತೆಗೆ ಅವರು ಪಾಲುದಾರರಾಗಿದ್ದ ಹಗರಣಗಳ ಸಾಕ್ಷ್ಯಾಧಾರಗಳಿರುವ ಕಡತಗಳು, ದಾಖಲೆಗಳು ಮತ್ತು ಪೆನ್ ಡ್ರೈವ್‌ಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಎನ್‌ಜಿಒ ಅಧಿಕಾರಿಗಳು ತಮ್ಮ ವಿರುದ್ಧ ವಿಜಿಲೆನ್ಸ್ ಇಲಾಖೆ ಮತ್ತು ಇತರ ವೇದಿಕೆಗಳಲ್ಲಿ ಸಲ್ಲಿಸಿರುವ ಭ್ರಷ್ಟಾಚಾರದ ದೂರುಗಳನ್ನು ತಕ್ಷಣವೇ ಹಿಂಪಡೆಯದಿದ್ದರೆ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ದೂರುದಾರರು ಹೇಳಿದ್ದರು.
ಅಲ್ಲದೇ, ದುಷ್ಕರ್ಮಿಗಳು ಕಚೇರಿಯ ಡ್ರಾಯರ್‌ನಲ್ಲಿಟ್ಟಿದ್ದ 63 ಸಾವಿರ ನಗದು ದೋಚಿಕೊಂಡು ಹೋಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.