ಜೈಪುರ: ಪಾಪಿ ಪತಿಯೊಬ್ಬ ಪತ್ನಿಗೆ ತನ್ನ ಕುಟುಂಬದಲ್ಲಿನ ಇನ್ನಿತರರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪತಿ ಸೇರಿದಂತೆ ಕುಟುಂಬದ 8 ಜನರ ಮೇಲೆ ದೂರು ದಾಖಲಾಗಿದೆ. ಸಂದ್ವಾ ಪೊಲೀಸ್ ಠಾಣೆ (Sandwa Police Station)ಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪತಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮಹಿಳೆಗೆ ಮೂವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಇದ್ದಾರೆ. ಮದುವೆಯಾಗಿ ಸುಮಾರು 15-20 ವರ್ಷಗಳಿಂದ ಪತಿಯಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಪತಿ ತನಗೆ ನಿರಂತರವಾಗಿ ಅಮಲಿನ ಪದಾರ್ಥ ನೀಡಿ ಕುಟುಂಬದ ಇತರ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಥಳಿಸಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಮಹಿಳೆ ಟೀ ಕುಡಿದು ಪ್ರಜ್ಞೆ ತಪ್ಪುತ್ತಿದ್ದಂತೆ ಕುಟುಂಬದ ಇನ್ನಿತರರು ಅತ್ಯಾಚಾರ ನಡೆಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದು, ಬೇರೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.