ರಾಮನಗರ: ಡಿ.ಕೆ. ಸುರೇಶ್ ರನ್ನು ಬೇರು ಸಮೇತ ಕೀಳಬೇಕು ಎಂಬ ಕಾರಣಕ್ಕೆ ಬೆಂಗಳೂರು ಗ್ರಾಮಾಂತರಕ್ಕೆ ಡಾ. ಮಂಜುನಾಥ್ ಅವರನ್ನು ಕರೆ ತರಲಾಗಿದೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಎ.ಮಂಜುನಾಥ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿವೈ ಸ್ಪರ್ಧೆ ಮಾಡದೆ ನನಗೆ ಬೆಂಬಲ ನೀಡಿದ್ದಾರೆಂಬ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದರೆ ಡಿಕೆ ಸುರೇಶ್ ಗೆಲ್ಲುತ್ತಿರಲಿಲ್ಲ. ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಮಂಜುನಾಥ್ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ.ಮಂಜುನಾಥ್ ವಿರುದ್ಧ ಗೆಲುವು ಸುಲಭವಿದ್ದರೆ ಕುಕ್ಕರ್, ಹಣ ಯಾಕೆ ಕೊಡುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಮುನಿರತ್ನ ಕಾಂಗ್ರೆಸ್ ಪರವಾಗಿದ್ದರು. ಆದರೂ ಬಿಜೆಪಿಗೆ ಅಲ್ಲಿ 30,000 ಲೀಡ್ ಇತ್ತು. ಇವತ್ತು ಮುನಿರತ್ನ ಬಿಜೆಪಿಯಲ್ಲಿದ್ದಾರೆ. ನಮ್ಮ ದೌರ್ಭಾಗ್ಯ ಬಿಜೆಪಿ-ಜೆಡಿಎಸ್ ಕಿತ್ತಾಡಿ ಅವರಿಗೆ ಲಾಭ ಆಗಿತ್ತು. ಈಗ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿದೆ. ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.