ಕೇಂದ್ರ ತನಿಖಾ ತಂಡದ 9 ಸಮನ್ಸ್ ಗೆ ಕ್ಯಾರೇ ಅನ್ನದ ನಾಯಕ, 7 ದಿನ ಅದರ ಬಂಧಿ! ಈಗ ಮತ್ತೆ ನಾಲ್ಕು ದಿನ ಬಂಧಿಯಾಗಲಿದ್ದಾರೆ. ಪ್ರಾಮಾಣಿಕತೆ ಬೋಧಿಸುತ್ತಿದ್ದ ನಾಯಕ, ಈಗ ಅದೇ ಸುಳಿಯಲ್ಲಿ ಸಿಲುಕಿದ್ದಾರೆ. ಹಾಗಾದರೆ ಕೇಜ್ರಿ ಮೇಲಿರುವ ಕ್ರೇಜಿ ಭ್ರಷ್ಟಾಚಾರ ಏನು?
ಅಬಕಾರಿ ವಲಯದ ಸುಧಾರಣೆಗಾಗಿ ದೆಹಲಿ ಆಪ್ ಸರ್ಕಾರ 2021ರಲ್ಲಿ ದಿಲ್ಲಿ ಅಬಕಾರಿ ನೀತಿ ಜಾರಿಗೆ ತಂದಿತ್ತು. ಇದರ ಮೂಲಕ ಖಾಸಗಿ ಕಂಪನಿಗಳು ಮತ್ತು ಉದ್ಯಮಗಳಿಗೆ ಚಿಲ್ಲರೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಯಿತು.
ಇದರ ಮೂಲಕ ಆಪ್ ಸರ್ಕಾರ ಹಾಗೂ ನಾಯಕರು ಲಂಚ ಪಡೆದು, ತನ್ನ ಪರವಾಗಿರುವ ಕಂಪನಿಗಳು, ಉದ್ಯಮಗಳ ಮಾಲೀಕರಿಗೆ ನೆರವು ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿತು. ಈ ಆರೋಪ ಜೋರಾಗುತ್ತಿದ್ದಂತೆ ಅಂದಿನ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಸಿಬಿಐ ತನಿಖೆಗೆ ಆದೇಶಿಸಿದರು. ಹೀಗಾಗಿ ಮುಂದಿನ ಅಪಾಯದ ಸುಳಿವು ಪಡೆದ ಸರ್ಕಾರವು 2022ರಲ್ಲಿ ತಾನೇ ತಂದಿದ್ದ ಹೊಸ ನೀತಿ ರದ್ದು ಮಾಡಿತು.
ಹಗರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ, ಆಪ್ ನಾಯಕ ಸಂಜಯ್ ಸಿಂಗ್, ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ.ಕವಿತಾ ಮತ್ತು ಅರಬಿಂದೋ ಫಾರ್ಮಾ ಡೈರೆಕ್ಟರ್ ಪಿ ಶರತ್ ಚಂದ್ರ ರೆಡ್ಡಿ ಸೇರಿದಂತೆ ಈಗಾಗಲೇ ಹಲವರು ಅರೆಸ್ಟ್ ಆಗಿದ್ದಾರೆ. ಸದ್ಯ ಸಿಎಂ ಅರವಿಂದ್ ಈ ಸಾಲಿಗೆ ಸೇರಿದ್ದಾರೆ. ಇಷ್ಟೆಲ್ಲಾ ಘಟನೆಗಳು ಆಗೋದಕ್ಕೆ ಮುಕ್ಯ ಕಾರಣವಾದದ್ದು ಅರವಿಂದ್ ಕೇಜ್ರಿವಾಲ್ ಸರ್ಕಾರ 2021 ರಲ್ಲಿ ಜಾರಿಗೆ ತಂದ ನೂತನ ಮದ್ಯ ಮಾರಾಟ ನೀತಿ ಹಳೆಯ ಕಾನೂನಿಗೆ ತಿದ್ದುಪಡಿ ತಂದು, ಹೊಸ ಕಾನೂನು ಜಾರಿ ಮಾಡಿತ್ತು. ಆ ಮೂಲಕ ಖಾಸಗಿ ಸಂಸ್ಥೆಗಳು ರೀಟೇಲ್ ಲಿಕ್ಕರ್ ವಲಯಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಿತ್ತು. ಆಗ ವರ್ಷಕ್ಕೆ 9,500 ಕೋಟಿ ರೂ. ಲಾಭ ಬರಲಿದೆ ಎಂದು ಆಪ್ ಹೇಳಿತ್ತು. ಇನ್ನೊಂದೆಡೆ ನಾಯಕರ ಜೇಬು ಕೂಡ ತುಂಬಿರುವುದು ತನಿಖೆಯಿಂದ ಬಯಲಾಗುತ್ತಾ ಹೋಯ್ತು.
ಈ ಎಲ್ಲ ವಿಷಯಗಳಲ್ಲಿ ಲಂಚ ಪಡೆದು, ಕಂಪೆನಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಎಂಬುವುದು ಎದುರಾಳಿ ಪಕ್ಷಗಳ ಆರೋಪವಾಗಿತ್ತು. ಆನಂತರ ತನಿಖೆಗೆ ಇಳಿದ ಕೇಂದ್ರ ತನಿಖಾ ಸಂಸ್ಥೆ, 15 ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ, ಹಣ ಪಡೆದಿರುವುದನ್ನು ಸಾಬೀತು ಮಾಡಿದೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಆಪ್ ಸರ್ಕಾರ ಈ ಸಂಬಂಧ ಕೈಗೊಂಡ ಕೆಲವು ಕ್ರಮಗಳು ಭ್ರಷ್ಟಾಚಾರ ಆರೋಪಗಳಿಗೆ ಪುಷ್ಟಿ ನೀಡಿದ್ವು. ಹೀಗೆ ಭ್ರಷ್ಟಾಚಾರ ನಡೆದಿರುವ ಆರೋಪಗಳು ಬಲಗೊಳ್ಳುತ್ತಲೇ ಇನ್ನಷ್ಟು ಮಾಹಿತಿ ಬಹಿರಂಗವಾದವು. ಲಂಚವನ್ನೇ ಕಾನೂನುಬದ್ಧಗೊಳಿಸಲು ಪ್ರಯತ್ನಿಸಲಾಗುತ್ತದೆ.ಎಂಬ ಆರೋಪ ಇವುಗಳಲ್ಲಿ ಬಹಳ ಮುಖ್ಯವಾದದ್ದು.
ಅಲ್ಲದೇ, ಈ ನೀತಿಯಿಂದ ಲಾಭ ಪಡೆದ ಮದ್ಯ ವ್ಯಾಪಾರಿಗಳು ಸಿಸೋಡಿಯಾ ಆಪ್ತ ಹಾಗೂ ಸಹಚರರಿಗೆ ಕೋಟ್ಯಂತರ ರೂ. ಪಾವತಿ ಮಾಡಿದ್ದಾರೆ ಎಂಬ ಆರೋಪ ಇಡಿ(ED)ಯದ್ದಾಗಿದೆ. ಆಮ್ ಆದ್ಮಿ ಪಕ್ಷದ ಚುನಾವಣಾ ವೆಚ್ಚಗಳನ್ನು ನೋಡುತ್ತಿದ್ದ ವಿಜಯ್ ನಾಯರ್ಗೆ ಕಂಪನಿಗಳು ಲೈಸೆನ್ಸ್ ಪಡೆಯಲು ಕಿಕ್ ಬ್ಯಾಕ್ ನೀಡಿವೆ. ಈ ನೀತಿಯಿಂದ ಲಾಭ ಪಡೆದ ಮದ್ಯ ವ್ಯಾಪಾರಿಗಳು ಕೇಜ್ರಿವಾಲ್ ಆಪ್ತ ಮಂತ್ರಿಗಳಿಗೆ, ಆಪ್ತರಿಗೆ, ಸಹಚರರಿಗೆ ಕೋಟ್ಯಂತರ ರೂ. ಪಾವತಿ ಮಾಡಿದ್ದಾರೆ.
ಅಲ್ಲದೇ, ಎಎಪಿ ನಾಯಕ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ವಿರುದ್ಧ 2023 ರಲ್ಲಿ ಅಬಕಾರಿ ನೀತಿಯಲ್ಲಿ ಉತ್ಪತ್ತಿಯಾದ 45 ಕೋಟಿ ರೂಪಾಯಿ ಕಿಕ್ ಬ್ಯಾಕ್ ಅನ್ನು 2022 ರಲ್ಲಿ ಗೋವಾ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಳಕೆ ಮಾಡಲು ತಂತ್ರ ರೂಪಿಸಿರುವ ಆರೋಪ ತನಿಖೆಯಿಂದ ಕೇಳಿ ಬಂದಿದೆ. ಇದಕ್ಕಾಗಿ ಸಂಜಯ್ ಸಿಂಗ್ 2 ಕೋಟಿ ರೂ. ಲಂಚ ಪಡೆದಿದ್ದರು ಎಂಬುವುದು ಬಹಿರಂಗವಾಗಿದೆ.
ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಆರ್ ಎಸ್ ನಾಯಕಿ ಕೆ. ಕವಿತಾ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿಜಯ್ ನಾಯರ್ ಜೊತೆ ಸಂಪರ್ಕದಲ್ಲಿದ್ದರು. ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಡೆದಿರುವ ವಿಷಯಕ್ಕೆ ಸಂಬಂಧಿಸಿದಂತೆ 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಾವತಿಸಿದ ಮದ್ಯದ ಕಾರ್ಟೆಲ್ ‘ದಿ ಸೌತ್ ಗ್ರೂಪ್’ ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ. ಹೀಗಾಗಿಯೇ ಇಡಿ ಅವರನ್ನು ಬಂಧಿಸಿದೆ.
ಈ ಪ್ರಕರಣ ಕೇವಲ ಆಪ್ ಸರ್ಕಾರದ ನಾಯಕರು 100 ಕೋಟಿ ಲಂಚ ಪಡೆದುಕೊಂಡಿರುವುದು ಮಾತ್ರವಲ್ಲ. ಈ ಅಬಕಾರಿ ನೀತಿಯಿಂದ ಮದ್ಯ ಕಂಪನಿಗಳು 600 ಕೋಟಿ ರೂಪಾಯಿ ಅಸಾಧಾರಣ ಲಾಭ ಪಡೆದುಕೊಂಡಿವೆ ಎಂದು ತನಿಖಾ ಏಜೆನ್ಸಿ ಇಡಿ ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದೆ.
2022ರಲ್ಲಿ ಮದ್ಯ ಹಗರಣ ಪ್ರಕರಣದಲ್ಲಿ ಸಮೀರ್ ಮಹೇಂದ್ರು ಮೊದಲು ಬಂಧಿಯಾದ ವ್ಯಕ್ತಿ. ಈತನ ಮೇಲೆ ಎರಡು ಬಾರಿ ಲಂಚ ನೀಡಿದ ಆರೋಪವಿದೆ. ಮೊದಲ ಪಾವತಿಯಾಗಿ 1 ಕೋಟಿ ರೂ.ಗಳನ್ನು ಅಂದಿನ ದೆಹಲಿಯ ಡಿಸಿಎಂ ಮನೀಶ್ ಸಿಸೋಡಿಯಾ ಅವರ ನಿಕಟವರ್ತಿ ದಿನೇಶ್ ಅರೋರಾ ಅವರಿಗೆ ನೀಡಿದ್ದರು ಎನ್ನಲಾಗಿದೆ. ಎರಡನೇ ಬಾರಿಗೆ ಗುರುಗ್ರಾಮ್ನ ಮಧ್ಯವರ್ತಿ ಅರ್ಜುನ್ ಗೆ 2 ರಿಂದ 4 ಕೋಟಿ ರೂ. ನೀಡಿದ್ದರು ಎಂಬುವುದು ತನಿಖೆಯಿಂದ ತಿಳಿದಿದೆ.
ಸದ್ಯ ಈ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಎಷ್ಟು ಪಾಲು ಹೋಗಿದೆ ಎಂಬುವುದನ್ನು ಮಾತ್ರ ಇಡೀ ಸ್ಪಷ್ಟಪಡಿಸಿಲ್ಲ. ಆದ್ರೆ ವಿಚಾರಣೆ ಸಂದರ್ಭದಲ್ಲಿ ಈ ಪ್ರಕರಣದ ಕಿಂಗ್ ಪಿನ್ನೇ ಕೇಜ್ರಿವಾಲ್ ಎಂದು ಇಡಿ ವಾದಿಸುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದ ವಿಷಯ ಕೇಜ್ರಿವಾಲ್ ಗೆ ಗೊತ್ತಿತ್ತು. ಮಧ್ಯವರ್ತಿ ವಿಜಯ್ ನಾಯರ್ ಕೇಜ್ರಿವಾಲ್ ರನ್ನು ಭೇಟಿ ಮಾಡಿದ್ದ ಅಂಶವೂ ಬಯಲಾಗಿದೆ.
ಇಷ್ಟೆಲ್ಲಾ ಹೇಳಿದ ಮೇಲೆ… “ಇದ್ದಿಲು ಮಸಿಗೆ ಬುದ್ಧಿ ಹೇಳಿತು ಅಂತಾರಲ್ಲ, ಹಾಗೆ ಆಗೋಯ್ತಾ ಈ ಪ್ರಕರಣ” ಅಂತ ಅನಿಸದೇ ಇರೋಲ್ಲ. ಭ್ರಷ್ಟಾಚಾರದ ವಿರುದ್ಧವೇ ದನಿ ಎತ್ತಿ ಅಧಿಕಾರಕ್ಕೆ ಬಂದ ವ್ಯಕ್ತಿಯೊಬ್ಬ ಕೊನೆಗೆ ಭ್ರಷ್ಟಾಚಾರದ ಆರೋಪದ ಮೇಲೆಯೇ ಜೈಲು ಸೇರುವಂಥಾದದ್ದು, ಈ ದೇಶದ ರಾಜಕೀಯದಲ್ಲೊಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ.