ಚೆನ್ನೈ: ಚೆನ್ನೈ ತಂಡದ ರನ್ ಹೊಳೆಯಲ್ಲಿ ಗುಜರಾತ್ ಟೈಟಾನ್ಸ್ ತೇಲಿ ಹೋಗಿದೆ.
ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 63 ರನ್ ಗಳ ಭರ್ಜರಿ ಜಯ ಕಂಡಿದೆ. ಈ ಗೆಲುವಿನ ಮೂಲಕ ಚೆನ್ನೈ ಟಾಪ್ ಮೊದಲ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ 6 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲು ಅನುಭವಿಸಿತು. ಶುಭಮನ್ ಗಿಲ್ 8 ಔಟ್ ಆದರು. ಆನಂತರ ಕೇವಲ 55 ರನ್ ಗಳಿಸುವಷ್ಟರಲ್ಲಿಯೇ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. 12 ರನ್ ಗಳಿಸಿದ್ದ ವಿಜಯ್ ಶಂಕರ್ ಕ್ಯಾಚ್ ನ್ನು ಧೋನಿ ಭರ್ಜರಿಯಾಗಿ ಹಿಡಿದರು. 21 ರನ್ ಗಳಿಸಿ ಸಿಕ್ಸ್ ಸಿಡಿಸಲು ಹೋಗಿ ರಹಾನೆ ಹಿಡಿದ ಉತ್ತಮ ಕ್ಯಾಚ್‌ಗೆ ಡೇವಿಡ್ ಮಿಲ್ಲರ್ ಔಟಾದರು. ಸಾಯಿ ಸುದರ್ಶನ್ 37 ರನ್, ಡೇವಿಡ್ ಮಿಲ್ಲರ್ 21 ರನ್ ಗಳಿಸಿ ಔಟಾದರು.
ದೀಪಕ್ ಚಹರ್ 2, ತುಷಾರ್ ದೇಶಾಪಂಡೆ 2, ಮುಸ್ತಫಿಜುರ್ ರೆಹಮಾನ್ 2 ವಿಕೆಟ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಚೆನ್ನೈ ಪರ ಋತುರಾಜ್ ಗಾಯಕ್ವಾಡ್, ರಚಿನ್ ರವೀಂದ್ರ ಸ್ಪೋಟಕ ಆರಂಭ ನೀಡಿದರು. ಮೊದಲ ವಿಕೆಟಿಗೆ 32 ಎಸೆತಗಳಲ್ಲಿ 62ರನ್ ಜೊತೆಯಾಟ ನೀಡಿದರು. ರಚಿನ್ ರವೀಂದ್ರ 46 ರನ್, ಗಾಯಕ್ವಾಡ್ 46 ರನ್, ಅಜಿಂಕ್ಯಾ ರಹಾನೆ 12 ರನ್ ಗಳಿಸಿದರು. ಶಿವಂ ದುಬೆ ಸಿಕ್ಸರ್ ಸುರಿಮಳೆಗೈದರು. 23 ಎಸೆತಗಳಲ್ಲಿ 5 ಸಿಕ್ಸ್, 2 ಬೌಂಡರಿಯೊಂದಿಗೆ 51 ರನ್ ಗಳಿಸಿದರು. ಡೆರೆಲ್ ಮಿಚೆಲ್ ಔಟಾಗದೇ 24 ರನ್ ಮತ್ತು ಸಮೀರ್ ರಿಜ್ವಿ 14 ರನ್ ಗಳಿಸಿದರು.