ನಮ್ಮ ಸಂವಿಧಾನದ 15ನೇ ಭಾಗದಲ್ಲಿನ 324ನೇ ವಿಧಿಯು, ಸ್ವತಂತ್ರ ಮತ್ತು ನಿರ್ಭೀತ ಚುನಾವಣಾ ಆಯೋಗದ ರಚನೆಗೆ ಅವಕಾಶ ಮಾಡಿ ಕೊಟ್ಟಿದೆ. ಸಂಸತ್ತು, ರಾಜ್ಯ ಶಾಸನ ಸಭೆ, ರಾಷ್ಟ್ರಾಧ್ಯಕ್ಷರು ಮತ್ತು ಉಪ ರಾಷ್ಟ್ರಾಧ್ಯಕ್ಷರ ಚುನಾವಣೆ ನೆಡೆಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿರುತ್ತದೆ. ಇಲ್ಲಿ ಗಮಿನಿಸಬೇಕಾದ ವಿಷಯವೇನೆಂದರೆ, ಇದು ಸ್ಥಳೀಯ ಸರ್ಕಾರಗಳ ಚುನಾವಣೆಯನ್ನು ನೆಡೆಸುವುದಿಲ್ಲ, ಅದಕ್ಕಾಗಿಯೇ ಪ್ರತ್ಯೇಕವಾದ ರಾಜ್ಯ ಚುನಾವಣಾ ಆಯೋಗವಿರುತ್ತದೆ. ಚುನಾವಣಾ ಆಯೋಗದ ಸದಸ್ಯರಿಗೆ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸ್ಥಾನಮಾನ ನೀಡಲಾಗಿದ್ದು, ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು, ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಆಧಾರ ಮತ್ತು ವಿಧಾನವನ್ನು ಅನುಸರಿಸಬೇಕಾಗುತ್ತದೆ.
ಮೊದಲಿಗೆ 1950 ಜನವರಿ 25 ರಂದು ಜಾರಿಗೆ ಬಂದ ಚುನಾವಣಾ ಆಯೋಗದ ಪ್ರಥಮ ಆಯುಕ್ತರಾದವರು ಸುಕುಮಾರ್ ಸೇನ್. ಹಾಗೂ ದೇಶದ ಮೊದಲ ಮಹಿಳಾ ಆಯುಕ್ತೆ ವಿ. ಎಸ್. ರಮಾದೇವಿ ಯಾಗಿರುತ್ತಾರೆ. ಇವರನ್ನು ರಾಷ್ಟ್ರಾಧ್ಯಕ್ಷರು ಆಯ್ಕೆ ಮಾಡುತ್ತಾರೆ ಮತ್ತು ಇವರ ಅಧಿಕಾರವಧಿ 6 ವರ್ಷ ಅಥವಾ ಅವಧಿ ಮುಗಿಯುವುದಕ್ಕೆ ಮೊದಲೇ 65 ವರ್ಷ ತುಂಬಿದರೆ ಹುದ್ದೆಯಿಂದ ನಿವೃತ್ತಿಯಾಗಬೇಕಾಗುತ್ತದೆ. 1989 ರವರೆಗೂ ಚುನಾವಣಾ ಆಯೋಗವು ಏಕ ಸದಸ್ಯ ವಾಗಿದ್ದು, ಅಕ್ಟೋಬರ್ 16 1989 ರಂದು ರಾಷ್ಟ್ರಾಧ್ಯಕ್ಷರು, ಇಬ್ಬರು ಹೆಚ್ಚುವರಿ ಆಯುಕ್ತರನ್ನ ನೇಮಕ ಮಾಡುವ ಮೂಲಕ ಹೊಸ ಬದಲಾವಣೆ ತರುತ್ತಾರೆ. ಹೀಗೆ ಆಗ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಆರ್.ವಿ.ಎಸ್. ಪೆರಿಶಾಸ್ತ್ರಿ ಇವರ ಜೊತೆ ಹೆಚ್ಚುವರಿ ಚುನಾವಣಾಧಿಕಾರಿಗಳಾಗಿ ಎಸ್.ಎಸ್. ಧನೋವ ಮತ್ತು ವಿ ಎಸ್ ಸೀಗೆಲ್ ಆಯ್ಕೆಯಾಗುತ್ತಾರೆ. ಇವರ ಅಧಿಕಾರ ಅವಧಿಯು ಹೆಚ್ಚು ದಿನಗಳವರೆಗೆ ಇರಲಿಲ್ಲ. ಇದು ಜನವರಿ 1, 1990ರಲ್ಲಿ ರಾಷ್ಟ್ರಾಧ್ಯಕ್ಷರು ತಾವು ಆಯ್ಕೆ ಮಾಡಿದ್ದ ಹೆಚ್ಚುವರಿ ಚುನಾವಣಾ ಆಯುಕ್ತರನ್ನು ತಾವೇ ರದ್ಧು ಪಡಿಸಿದರು. ಮುಂದೆ ಇದು 1993ರಲ್ಲಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರ ಉಪಸ್ಥಿತಿಯಲ್ಲಿ ತ್ರಿ ಸದಸ್ಯ ಚುನಾವಣಾ ಆಯೋಗವಾಗಿ ಬದಲಾಯಿತು, ಇಲ್ಲಿ ಒಬ್ಬರು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರು ನೇಮಕವಾಗುತ್ತಾರೆ. ಪ್ರಸ್ತುತ ಚುನಾವಣಾ ಆಯೋಗದಲ್ಲಿ ಇದೇ ವ್ಯವಸ್ಥೆ ಚಾಲ್ತಿಯಲ್ಲಿದ್ದು, 15 ಮೇ 2022 ರಿಂದ ರಾಜೀವ್ ಕುಮಾರ್ “ಮುಖ್ಯ” ಚುನಾವಣಾ ಆಯುಕ್ತರಾಗಿ ಹಾಗೂ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಇವರುಗಳು ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
