ಬೆಂಗಳೂರು: ಗುಜರಾತ್ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡ ಭರ್ಜರಿ ಜಯ ದಾಖಲಿಸಿದೆ.
ಮೆಗ್ ಲ್ಯಾನಿಂಗ್ ಅರ್ಧಶತಕ ಹಾಗೂ ಜೆಸ್ ಜೊನಾಸೆನ್, ಅನ್ನಾಬೆಲ್ ಸದರ್ಲೆಂಡ್ ಬೌಲಿಂಗ್ ದಾಳಿಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 25 ರನ್ ಗಳ ಜಯ ಸಾಧಿಸಿದೆ. ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 164 ರನ್ ಸಿಡಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡ 8 ವಿಕೆಟ್ ಕಳೆದುಕೊಂಡು 138 ರನ್ ಗಳನ್ನು ಮಾತ್ರ ಗಳಿಸಲು ಯಶಸ್ವಿಯಾಯಿತು.
ಆರಂಭದಲ್ಲಿ ಡೆಲ್ಲಿ ತಂಡಕ್ಕೆ ಕೂಡ ಆಘಾತ ಎದುರಾಗಿತ್ತು. ಮೂರನೇ ಓವರ್‌ನಲ್ಲಿ ಶಫಾಲಿ ವರ್ಮಾ ಕೇವಲ 13 ರನ್, ಅಲೈಸ್ ಕ್ಯಾಪ್ಸಿಗೊ 27 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ಸಂದರ್ಭದಲ್ಲಿ ನಾಯಕಿ ಲ್ಯಾನಿಂಗ್ ಅರ್ಧ ಶತಕ ಸಿಡಿಸಿ ಮಿಂಚಿದರು. ಜೆಮಿಯಾ ರಾಡ್ರಿಗಸ್ 7 ರನ್ ಸಿಡಿಸಿದರು. ಕೊನೆಗೆ ಡೆಲ್ಲಿ ತಂಡವು 162 ಸಿಡಿಸಿತು.
ಗುರಿ ಬೆನ್ನಟ್ಟಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಬೆತ್ ಮೂನಿ ಕೇವಲ 12 ರನ್, ಲಾರಾ ವೊಲ್ವಾರ್ಡ್ಟ್ ಶೂನ್ಯ, ಫೋಬೆ ಲಿಚ್ಫೀಲ್ಡ್ 15, ವೇದಾ ಕೃಷ್ಣಮೂರ್ತಿ 12 ರನ್ ಗಳಿಸಿದರು. ಆಶ್ಲೀ ಗಾರ್ಡ್ನರ್ ಏಕಾಂಗಿ ಹೋರಾಟ ನಡೆಸಿದರೂ ಪಂದ್ಯ ಕೈ ಚೆಲ್ಲುವಂತಾಯಿತು.
ಡೆಲ್ಲಿ ತಂಡದ ಪರ ಜೆಸ್ ಜೊನಾಸೆನ್ ಹಾಗೂ ರಾಧಾ ಯಾದವ್ ತಲಾ 3 ವಿಕೆಟ್ ಕಬಳಿಸಿದರೆ, ಗುಜರಾತ್ ಪರ ಮೇಘನಾ ಸಿಂಗ್ 4 ವಿಕೆಟ್ ಕಬಳಿಸಿದರು.