ಲಕ್ನೋ: ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳು ಜೈಲಿಗೆ ಹೋಗಲೂ ಭಯ ಪಡುತ್ತಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಶಂಸಾಬಾದ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ನಾವು ಶೂನ್ಯ ಸಹಿಷ್ಣುತೆಯ ನೀತಿ ಅನುಸರಿಸುತ್ತಿದ್ದೇವೆ. ಕ್ರಿಮಿನಲ್ ವ್ಯಕ್ತಿಗಳು ಅಪರಾಧವನ್ನು ನಿಲ್ಲಿಸಬೇಕು ಅಥವಾ ಅದಕ್ಕೆ ತಕ್ಕುದಾದ ಬೆಲೆಯನ್ನು ಪಾವತಿಸಲು ಸಿದ್ಧರಾಗಬೇಕು. ಈಗ ಬಹುತೇಕ ಕ್ರಿಮಿನಲ್‌ಗಳು ಜೈಲಿಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಂದಾ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಸಾವನ್ನಪ್ಪಿದ ನಂತರ ಅವರ ಈ ಹೇಳಿಕೆ ವಿಶೇಷವಾಗಿದೆ. ಕುಟುಂಬಸ್ಥರು ವಿಷ ಪ್ರಾಶನ ಮಾಡಿ ಅನ್ಸಾರಿಯನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. 2017ರ ಮೊದಲು ಪೊಲೀಸ್ ಠಾಣೆಗಳು ಸೂರ್ಯಾಸ್ತದ ನಂತರ ಬೀಗ ಹಾಕುತ್ತಿದ್ದವು. ಆದರೆ, ಸರ್ಕಾರ ಬದಲಾದ ನಂತರ, ಅಪರಾಧಿಗಳು ಮೊದಲಿನಂತೆಯೇ ಇರುತ್ತದೆ ಎಂದು ಭಾವಿಸಿದ್ದರು. ನಾವು ನಮ್ಮ ರಾಜ್ಯದಲ್ಲಿ ಅಪರಾಧದ ಬಗ್ಗೆ ‘ಶೂನ್ಯ ಸಹಿಷ್ಣುತೆ’ ನೀತಿ ತಂದಿದ್ದೇವೆ ಎಂದು ಹೇಳಿದ್ದಾರೆ.
ಜಾಮೀನು ಸಿಕ್ಕು ಪರಾರಿಯಾಗುತ್ತಿದ್ದವರು ತಾವಾಗಿಯೇ ಶರಣಾಗುತ್ತಿದ್ದಾರೆ. ಅಪರಾಧಿಗಳು ನಮ್ಮನ್ನು ಜೈಲಿಗೆ ಕಳುಹಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.