ವಿಜಯಪುರ: ಬಿಸಿಲಿನ ಬೇಗೆಗೆ ಕಂಗಾಲಾಗಿದ್ದ ಜನರ ಬದುಕನ್ನು ಈಗ ಮಳೆರಾಯ ತಂಪಾಗಿಸಿದ್ದಾನೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆರಾಯ ಭೂಮಿಗೆ ಇಳಿದಿದ್ದಾನೆ. ಹೀಗಾಗಿ ಜನರು ಹಾಗೂ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕೆಲವೆಡೆ ಜನ -ಜೀವನ ಅಸ್ತವ್ಯಸ್ಥಗೊಂಡಿದೆ.
ಹಲವೆಡೆ ಗುಡುಗು- ಸಿಡಿಲಿನ ಮಳೆಯಾಗಿದೆ. ಅಲ್ಲದೇ, ಮುಂದಿನ ಒಂದು ವಾರಗಳ ಕಾಲ ಸುಮಾರು 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಕೂಡ ಹವಾಮಾನ ಇಲಾಖೆ ನೀಡಿದೆ. ಬೆಳಗಾವಿ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಭಾರತಿ ಕೆಂಗನಾಳ(40) ಸಾವನ್ನಪ್ಪಿದ ಮಹಿಳೆ. ಗುರುವಾರವಷ್ಟೇ ಸಿಡಿಲಿಗೆ ಇಬ್ಬರು ಬಲಿಯಾಗಿದ್ದರು. ಇದು ಮಾಸುವ ಮುನ್ನವೇ ಮತ್ತೊಂದು ಇಂತಹ ಪ್ರಕರಣ ದಾಖಲಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಳ್ಳಿಯೊಂದರಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ 10ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಭಾರೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ, ಸಂಗಮೇಶ್ವರ ಪೇಟೆ, ಜೇನುಗದ್ದೆ, ಶಿರಗೋಳ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಹಲವೆಡೆ ಮರಗಳು ಧರೆಗೆ ಉರುಳಿವೆ. ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಕೂಡ ಕೆಲವು ಸಮಯದವರೆಗೆ ಭಾರೀ ಮಳೆಯಾಗಿದೆ.