ಯಾದಗಿರಿ: ಸಹೋದರ ಸಂಬಂಧಿಗಳ ಮಧ್ಯೆ ಕುಡಿಯುವ ನೀರಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹುಣಸಗಿಯಲ್ಲಿ ಈ ಘಟನೆ ನಡೆದಿದೆ. ನಗರದ ನಂದಕುಮಾರ್ ಕಟ್ಟಿಮನಿ (21) ಕೊಲೆಯಾದ ಯುವಕ. ಕೊಲೆಯಾಗಿರುವ ನಂದಕುಮಾರ್ ನ ಚಿಕ್ಕಪ್ಪನ ಮಗ ಹನುಮಂತ ಹಾಗೂ ಆತನ ತಾಯಿ ಹನುಮವ್ವ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇಬ್ಬರ ಮನೆಯ ಹತ್ತಿರ ಸರ್ಕಾರಿ ಕುಡಿಯುವ ನೀರಿನ ನಲ್ಲಿ ಇದೆ. ಆ ನೀರನ್ನು ಎರಡೂ ಕುಟುಂಬದವರು ಬಳಸುತ್ತಿದ್ದರು. ಎಂದಿನಂತೆ ಕೊಲೆಯಾಗಿರುವ ಯುವಕನ ಅಜ್ಜಿ ನೀರು ತರಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಜಗಳ ಆರಂಭವಾಗಿದೆ.
ಹತ್ಯೆಯಾದ ನಂದಕುಮಾರ್, ಪದವಿ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದಾನೆ. ಆಗ ಆತನ ಅಜ್ಜಿ ಜಗಳ ವಿಚಾರ ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋಗಿದ್ದ ಸಂದರ್ಭದಲ್ಲಿ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ನಂದಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.