ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಅವರು ಕಿಂಗ್ ಕೊಹ್ಲಿ ದಾಖಲೆ ಮುರಿದಿದ್ದಾರೆ.
11ನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಶಿಖರ್ ಧವನ್ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಶಿಖರ್ ಧವನ್ 50 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಯೊಂದಿಗೆ 70 ರನ್ ಗಳಿಸಿದ್ದಾರೆ. ಈ ಅರ್ಧ ಶತಕದ ನೆರವಿನಿಂದಾಗಿ ಐಪಿಎಲ್ ಇತಿಹಾಸದಲ್ಲಿಯೇ ಚೇಸಿಂಗ್ ವೇಳೆ ಅತ್ಯಧಿಕ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕೊಹ್ಲಿ ಹೆಸರಿನಲ್ಲಿತ್ತು.
ಐಪಿಎಲ್ನಲ್ಲಿ 232 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಒಟ್ಟು 52 ಅರ್ಧ ಶತಕ ಸಿಡಿಸಿದ್ದಾರೆ. ಈ ಅರ್ಧಶತಕಗಳಲ್ಲಿ 21 ಅರ್ಧ ಶತಕಗಳು ಚೇಸಿಂಗ್ ವೇಳೆ ಸಿಡಿದಿವೆ. ಈ ಮೂಲಕ ಶಿಖರ್ ಧವನ್ ಚೇಸಿಂಗ್ ವೇಳೆ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಐಪಿಎಲ್ ಹಂಗಾಮದಲ್ಲಿ ಒಟ್ಟು ಇಲ್ಲಿಯವರೆಗೆ 219 ಪಂದ್ಯಗಳನ್ನಾಡಿರುವ ಧವನ್ ಒಟ್ಟು 51 ಅರ್ಧ ಶತಕ ಗಳಿಸಿದ್ದಾರೆ. ಚೇಸಿಂಗ್ ನಲ್ಲಿ 22 ಅರ್ಧಶತಕಗಳು ಮೂಡಿಬಂದಿವೆ. ಐಪಿಎಲ್ ಇತಿಹಾಸದಲ್ಲಿಯೇ ಚೇಸಿಂಗ್ ವೇಳೆ ಅತೀ ಹೆಚ್ಚು ಅರ್ಧಶತಕ ಬಾರಿಸಿದ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ಐಪಿಎಲ್ನಲ್ಲಿ 178 ಇನಿಂಗ್ಸ್ ಆಡಿರುವ ವಾರ್ನರ್ 61 ಅರ್ಧಶತಕ ಸಿಡಿಸಿದ್ದಾರೆ. ಈ ಪೈಕಿ 34 ಅರ್ಧ ಶತಕಗಳು ಚೇಸಿಂಗ್ ವೇಳೆ ಮೂಡಿ ಬಂದಿವೆ.