ಕಾಡಲ್ಲಿ ಆಗಾಗ ಕಾಣಿಸಿಕೊಳ್ಳುವ ಕಾಡ್ಗಿಚ್ಚು ಪ್ರಕರಣಗಳತ್ತ ವಿಶೇಷ ಗಮನ ಹರಿಸಿದಂತಿರುವ ಅರಣ್ಯ ಇಲಾಖೆ ಆ ಬಗ್ಗೆ ಹೊಸ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಕೆಲವೇ ಗಂಟೆಗಳಲ್ಲಿ ಮಾಹಿತಿ ಪೂರೈಸುವ ದೂರ ಸಂವೇದಿ ತಂತ್ರಜ್ಞಾನವನ್ನ ಬಳಕೆ ಮಾಡಿಕೊಳ್ಳಲು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಅರಣ್ಯ ಭವನದಲ್ಲಿ ನಡೆದ ಅರಣ್ಯಾಧಿಕಾರಿಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ದೂರ ಸಂವೇದಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ವೀಕ್ಷಿಸಲಾಯಿತು. ಈ ತಂತ್ರಜ್ಞಾನವು ಉಪಗ್ರಹಗಳ ನೆರವಿನೊಂದಿಗೆ ಕಾರ್ಯ ನಿರ್ವಹಿಸಲಿದ್ದು, ನೇರವಾಗಿ ನಾಸದಿಂದ ಇಸ್ರೋ ಎನ್ ಆರ್ ಎಸ್ ಸಿಗೆ ಮಾಹಿತಿ ರವಾನೆಯಾಗಿ ಕರ್ನಾಟಕದ ದೂರ ಸಂವೇದಿ ಸಂಸ್ಥೆಗೆ ಮಾಹಿತಿ ಬರಲಿದೆ. ಆ ಮೂಲಕ ಅರಣ್ಯ ಇಲಾಖೆಗೆ ಸುದ್ದಿ ತಲುಪಲಿದೆ. ಈ ಮೊದಲು ನಾಸಾದಿಂದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರಕ್ಕೆ ರವಾನೆಯಾಗಿ ಅಲ್ಲಿಂದ ಭಾರತೀಯ ಅರಣ್ಯ ಸಂರಕ್ಷಣಾ ಇಲಾಖೆ ತಲುಪಿ ಆ ನಂತರದಲ್ಲಿ ಆಯಾ ರಾಜ್ಯಗಳಿಗೆ ಮಾಹಿತಿ ತಲುಪುತ್ತಿತ್ತು. ಇದೀಗ ನೇರ ಮಾಹಿತಿ ರವಾನಯಾಗಿ ಆಪತ್ತು ತಡೆಯಲು ಇಲಾಖೆಗೆ ಕಾಲಾವಕಾಶ ಹೆಚ್ಚು ಸಿಕ್ಕಂತಾಯಿತು.