ಬಾಗಲಕೋಟೆ: ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಕಳ್ಳತನದ ಆರೋಪಿ ಮಾಡಿ ಪರಿಶೀಲಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಕದಂಪುರದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ದಿವ್ಯಾ ಬಾರಕೇರ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಎನ್ನಲಾಗಿದೆ. ಮಾ. 15ರಂದು ಕದಂಪುರ ಪ್ರೌಢ ಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಎಂಬುವವರ 2 ಸಾವಿರ ರೂ. ಕಳೆದು ಹೋಗಿದೆ. ಹೀಗಾಗಿ ವಿದ್ಯಾರ್ಥಿಗಳ ಬಳಿ ವಿಚಾರಿಸಿದ್ದಾರೆ. ನಂತರ ಕೆಲವು ವಿದ್ಯಾರ್ಥಿನಿಯರ ವಿರುದ್ಧ ಆರೋಪ ಮಾಡಿ ದುರ್ಗಾದೇವಿ ಮುಂದೆ ಆಣೆ ಮಾಡಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಶಾಲಾ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಹಾಗೂ ಮುಖ್ಯ ಶಿಕ್ಷಕ ಕೆ.ಹೆಚ್ ಮುಜಾವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.