ಹೀಗೆ ಗೊಂದಲಕ್ಕೆ ಸಿಲುಕಿ ಬಿದ್ದಿದ್ದಾರೆ ರಾಜ್ಯದ ಶಾಲಾ ಮಕ್ಕಳು. ಪರೀಕ್ಷೆಗೆ ತಯಾರಾಗುವ ಬದಲು ವಿದ್ಯಾರ್ಥಿಗಳು ಈ ಗೊಂದಲಕ್ಕೆ ಬಿದ್ದಿದ್ದಾರೆ. ಪೋಷಕರೂ ಸಹ ಸರಿಯಾದ ಸ್ಪಷ್ಟತೆ ಇಲ್ಲದೆ ಕಂಗಾಲಾಗಿದ್ದಾರೆ.
ಈ ತರಗತಿಗಳ ಪರೀಕ್ಷೆ ವಿಷಯದಲ್ಲಿ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಶಿಕ್ಷಣ ಇಲಾಖೆ ಗೊತ್ತು ಗುರಿ ಇಲ್ಲದ ಇಲಾಖೆ ಆಗಿಬಿಟ್ಟಿದೆ.
ಅದೇನೋ ಗೊತ್ತಿಲ್ಲ…. ಕಾಂಗ್ರೆಸ್ ವಿರೋಧ ಪಕ್ಷದಲ್ಲಿಯೇ ಇರಲಿ, ಆಡಳಿತದಲ್ಲಿಯೇ ಇರಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮೂಗು ತೂರಿಸುವುದನ್ನು ಬಿಡುತ್ತಿಲ್ಲ. ಹೀಗಾಗಿ ಇದು ವಿದ್ಯಾರ್ಥಿಗಳು ಹಾಗೂ ಪೋಷಕರ ಸಂದಿಗ್ಧತೆಗೆ, ಆತಂಕಕ್ಕೆ ಕಾರಣವಾಗುತ್ತಲೇ ಇದೆ. ಈಗ ಬೋರ್ಡ್ ಪರೀಕ್ಷೆ ವಿಚಾರದಲ್ಲಿ ಕೂಡ ಇದೇ ಪರಿಸ್ಥಿತಿ ಎದುರಾಗಿದೆ,…
5, 8, 9 ಹಾಗೂ 11ನೇ ತರಗತಿ ಶಾಲಾ ಮಕ್ಕಳ ಮೌಲ್ಯಾಂಕನ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಮುಂದೂಡಿದೆ. ಈಗಾಗಲೇ ಎರಡು ವಿಷಯಗಳ ಪರೀಕ್ಷೆಯನ್ನು 28 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ಮೂಲಕ ಮೌಲ್ಯಾಂಕನ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಸರ್ಕಾರ ಬರುತ್ತಿದ್ದಂತೆ ಪರ- ವಿರೋಧ ಚರ್ಚೆಗಳು ಆರಂಭವಾಗಿದ್ದವು. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದವು.
ಹೀಗಾಗಿ ಖಾಸಗಿ ಶಾಲೆಗಳ ಒಕ್ಕೂಟ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಸದ್ಯ ಬೋರ್ಡ್ ಪರೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಮೊದಲು ಹೈಕೋರ್ಟ್ ಮಾ. 6ರಂದು ಪರೀಕ್ಷೆ ನಡೆಸಲು ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮಾ. 7ರಂದು ದ್ವಿಸದಸ್ಯ ಪೀಠದ ಮೊರೆ ಹೋಗಿತ್ತು. ಸರ್ಕಾರದ ವಾದ ಆಲಿಸಿದ ದ್ವಿ ಸದಸ್ಯ ಪಿಠವು ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು. ಹೀಗೆ ಒಂದೇ ದಿನದ ಅಂತರದಲ್ಲಿ ಎರಡು ವ್ಯತಿರಿಕ್ತ ಆದೇಶಗಳು ಹೊರಬಂದವು.
ಹೀಗಾಗಿ ಆಗ ಇದನ್ನು ಪ್ರಶ್ನಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ ಕುಸ್ಮಾ ಮತ್ತು ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಒಕ್ಕೂಟ ರುಪ್ಸಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈಗ ಬೋರ್ಡ್ ಪರೀಕ್ಷೆಗೆ ತಡೆಯಾಜ್ಞೆ ನೀಡಿದೆ. ಇದಲ್ಲದೆ ಸರ್ಕಾರಿ ಶಾಲೆಗಳ ಪಠ್ಯಕ್ರಮ ಹಾಗೂ ಖಾಸಗಿ ಶಾಲೆಗಳ ಪಠ್ಯಕ್ರಮ ವಿಭಿನ್ನವಾಗಿವೆ. ಕಲಿಕಾ ಚೇತರಿಕೆ ಪಠ್ಯಕ್ರಮದ ಪ್ರಶ್ನೆಗಳಿಗೆ ಖಾಸಗಿ ಶಾಲಾ ಮಕ್ಕಳು ಉತ್ತರಿಸುವುದು ಕಷ್ಟ. ಹೀಗಾಗಿ ಎಲ್ಲ ಮಕ್ಕಳಿಗೆ ಅನ್ವಯವಾಗುವಂತೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ಅವಕಾಶ ನೀಡಬಾರದು ಎಂದು ಖಾಸಗಿ ಶಾಲೆಗಳ ಒಕ್ಕೂಟ ಆಗ್ರಹಿಸಿತ್ತು.
ಮೊದಲು ಹೈಕೋರ್ಟ್ ಸರ್ಕಾರದ ಈ ಪರೀಕ್ಷೆ ಕಾನೂನು ಬಾಹಿರ ಎಂದು ಹೇಳಿತ್ತು. ಪರೀಕ್ಷಾ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಈ ಪರೀಕ್ಷೆ ನಡೆಸಬಾರದು ಆದೇಶ ನೀಡಿತ್ತು. ತರಗತಿಯಲ್ಲಿ ನೀಡುತ್ತಿರುವ ವಿಷಯವು ಗುಣಮಟ್ಟಕ್ಕೆ ತಕ್ಕಂತೆ ಇಲ್ಲ.ಹಾಗಾಗಿ, ನಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಶಾಲೆಗಳು ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇದನ್ನು ನಿರ್ಣಯಿಸಲು ಏಕರೂಪದ ಮೌಲ್ಯಮಾಪನ ನಡೆಸುವುದು ಉತ್ತಮ ಮಾರ್ಗ’ ಎಂದು ರಾಜ್ಯ ಸರ್ಕಾರ ವಾದಿಸಿತು. ಈ ವೇಳೆ ಕೋಪಗೊಂಡ ನ್ಯಾಯಮೂರ್ತಿ ಮಿತ್ತಲ್, ನೀವು ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದೀರಿ’ ಎಂದು ಕಟುವಾಗಿ ಆರೋಪಿಸಿದ ಘಟನೆಯೂ ಸುಪ್ರೀಂ ಕೋರ್ಟಲ್ಲಿ ನಡೆದು ಹೋಯ್ತು. ಸದ್ಯಕ್ಕೇನೊ ಪರೀಕ್ಷೆ ಮುಂದೆ ಹೋಗಿದೆ. ಆದರೆ, ಮತ್ತೆ ಯಾವಾಗ ಪರೀಕ್ಷೆ ನಡೆಯತ್ತೆ ? ಬೋರ್ಡ್ ಪರೀಕ್ಷೆನಾ? ಕ್ಲಾಸ್ ಪರೀಕ್ಷೆನಾ? ಎಂಬ ಗೊಂದಲ ಇನ್ನೂ ಮುಂದುವರೆದೇ ಇದೆ. ಇದಕ್ಕೆ ಸರ್ಕಾರ ಆದಷ್ಟು ಬೇಗ ಕೊನೆ ಹಾಡಬೇಕಿದೆ.