ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಕಾವು ರಂಗೇರಿದೆ. ಯಾರೂ ಮತದಾನ ಮಿಸ್ ಮಾಡಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವರಿಗೆ ಮನೆಯಲ್ಲಿಯೇ ಕುಳಿತು ಮತದಾನ ಮಾಡುವ ಅವಕಾಶ ನೀಡಿದೆ. ಅದರಂತೆ ಈ ಬಾರಿ ಒಟ್ಟು 12 ಲಕ್ಷ ಮತದಾರರು ಮನೆಯಲ್ಲಿಯೇ ಮತ ಚಲಾಯಿಸಲಿದ್ದಾರೆ.
ರಾಜ್ಯದಲ್ಲಿ 85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 5.7 ಲಕ್ಷ ಹಿರಿಯ ನಾಗರಿಕರು, 6.13 ಲಕ್ಷ ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ ಸಂಖ್ಯೆ ಹೇಳಿದೆ. ಈ ಹಿನ್ನೆಲೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಬೇಕಾದ ಅರ್ಜಿ ನಮೂನೆ 12ಡಿ (12D) ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ನಮೂನೆ 12ಡಿ ಮೂಲಕ ಅರ್ಹ ಮತದಾರರು ಮನೆಯಿಂದ ಮತ ಹಾಕಬಹುದು.
ಜನರು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ (https://www.eci,gov,in) ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ ಆಯಾ ವ್ಯಾಪ್ತಿಯ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಬಹುದು. ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಜನರು ಮನೆಯಿಂದಲೇ ಮತ ಚಲಾಯಿಸಿದ್ದರು.