ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ ಇನ್ನು ಮುಂದೆ ದಂಡ ಬೀಳಲಿದೆ.
ಗುರ್ ಗುರ್ ಸದ್ದು ಮಾಡುತ್ತ ಕಿಟಕಿಯಲ್ಲಿ, ರಸ್ತೆಯಲ್ಲಿ, ಮರದಲ್ಲಿ, ಪಾರ್ಕ್, ಟೇರಸ್ನಲ್ಲಿ ಹಾರಾಡುತ್ತಿದ್ದ ಪಾರಿವಾಳಗಳ ಸಂತಸಕ್ಕೆ ಈಗ ಬಿಬಿಎಂಪಿ ಬ್ರೇಕ್ ಹಾಕಿದೆ. ಸಿಲಿಕಾನ್ ಸಿಟಿಯಲ್ಲಿನ ರೇಸ್ ಕೋರ್ಸ್ ರಸ್ತೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ ರೂ 200 ದಂಡ ಹಾಕಲಾಗುತ್ತೆ ಎಂದು ಬೋರ್ಡ್ ಹಾಕಲಾಗಿದೆ. ಇದರಿಂದಾಗಿ ಪಕ್ಷಿ ಪ್ರಿಯರು ಗರಂ ಆಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಪಾರಿವಾಳಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಎಲ್ಲೆಲ್ಲಿ ಪಾರಿವಾಳಗಳು ಹೆಚ್ಚಾಗಿ ಕಂಡುಬರುತ್ತೋ ಅಲ್ಲಿ ಅವುಗಳಿಗೆ ಊಟ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಲ್ಲಿ ಪಾರಿವಾಳಗಳಿಗೆ ಊಟ ಹಾಕುವವರಿಗೆ 200 ದಂಡಹಾಕುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಕ್ರಮವಹಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ರೇಸ್ ಕೋರ್ಸ್ ರೋಡ್, ಕಬ್ಬನ್ ಪಾರ್ಕ್, ಸ್ಯಾಂಕಿ ಟ್ಯಾಂಕಿ ರಸ್ತೆಗಳಲ್ಲಿ ಬೋರ್ಡ್ ಹಾಕಲಾಗಿದೆ.
ಪರಿವಾಳಗಳ ರೆಕ್ಕೆಗಳಿಂದ ಅಸ್ತಮ ಕೇಸ್ ಗಳು ಹೆಚ್ಚಾಗುತ್ತಿದ್ದು, ಬೇಸಿಗೆಯಲ್ಲಿ ಪಾರಿವಾಳಗಳ ಸಂಖ್ಯೆ ಹೆಚ್ಚಾದರೆ ಆರೋಗ್ಯದ ಮೇಲೆ ಕೆಟ್ಪ ಪರಿಣಾಮ ಬೀರಲಿದೆ. ಹೀಗಾಗಿ ಜನಹಿತಕ್ಕಾಗಿ ಬಿಬಿಎಂಪಿ ವತಿಯಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.