ಚಾಲೆಂಜಿಂಗ್ ಸ್ಟಾರ್ ದರ್ಶನ್. ಸದ್ಯ ಕನ್ನಡ ಚಿತ್ರರಂಗದ ಮಟ್ಟಿಗೆ ಆ ಪಾಟಿ ‘ಪ್ಯಾನ್ ಬೇಸ್’ ಬೇರೆ ಯಾವ ನಟರಿಗೂ ಇಲ್ಲ. ಸಾರಥಿ ಚಿತ್ರದ ನಂತರದಿಂದ ಇತ್ತೀಚಿನ ಇವರ ನಟನೆಯ ಪ್ರತಿ ಸಿನಿಮಾಗಳೂ ಒಂದು ಹಿಡಿ ಹೆಚ್ಚೇ ಹೈಪ್ ಪಡೆದುಕೊಳ್ಳುತ್ತಿವೆ. ಅಭಿಮಾನಿಗಳು ಇವರ ಚಿತ್ರ ಅನೌನ್ಸ್ ಆಗುತ್ತಿದ್ದಂತೆಯೇ ಹೆಗಲಮೇಲೆ ಹೊತ್ತು ಪ್ರಚಾರ ಆರಂಭಿಸಲು ಶುರುವಿಡುತ್ತಾರೆ. ಅಲ್ಲಿಗೆ ಬಾಕ್ಸ್ ಆಪೀಸ್ ಗಟ್ಟಿಗೊಳ್ಳುತ್ತಾ ಸಾಗುತ್ತೆ.
ಹಾಗೆಯೇ ‘ತರುಣ್ ಸುಧೀರ್’ ನಿರ್ದೇಶನದ ‘ಕಾಟೇರ’ ಸಿನಿಮಾ ತೆರೆಕಂಡು ಹತ್ತಿರತ್ತಿರ ಐವತ್ತು ದಿನ ಪೂರೈಸುತ್ತಾ ಬಂದರೂ, ಇಂದಿಗೂ ಥಿಯೇಟರ್ ತುಂಬುತ್ತಲೇ ಇದೆ.
ಇತ್ತ ಕಾಟೇರ ನಂತರದಲ್ಲಿ ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ನಿರ್ದೇಶನದ ‘ಡೆವಿಲ್, ದಿ ಹೀರೋ’ ಚಿತ್ರ ಕಳೆದ ನವೆಂಬರ್ ತಿಂಗಳಲ್ಲೇ ಅನೌನ್ಸ್ ಆಗಿತ್ತಾದರೂ, ಸರಿಯಾದ ಮಾಹಿತಿ ಚಿತ್ರದ ಬಗ್ಗೆ ಸಿಕ್ಕಿರಲಿಲ್ಲ. ಇದೀಗ ಆಡಿಯೋ ರೈಟ್ಸ್ ‘ಸರೆಗಾಮ ಸೌತ್’ ಕಂಪೆನಿಯವರು ಭರ್ಜರಿ ಮೊತ್ತಕ್ಕೆ ಖರೀದಿಸಿದ್ದು, ಚಿತ್ರತಂಡ ಸುದ್ದಿಮಾಡಿಕೊಂಡಿದೆ. ಈ ನಡುವೆ ‘ಡೆವಿಲ್’ ನಲ್ಲಿನ “ದರ್ಶನ್ ಮೊದಲ ನೋಟ” ತೋರಿಸಲು ಚಿತ್ರತಂಡ ದಿನಾಂಕ ನಿಗದಿಮಾಡಿದೆ. ಇದೇ ಹದಿನೈದನೇ ತಾರೀಖಿಗೆ ‘ಫಸ್ಟ್ ಲುಕ್ ಟೀಸರ್’ ಬಿಡುಗಡೆಗೊಳಿಸಲು ಸಜ್ಜಾಗಿದೆ. ವಿಷಯ ತಿಳಿದ ದರ್ಶನ್ ‘ಸೆಲೆಬ್ರಿಟಿ’ಗಳು ‘ಕಣ್ಣಿಗೆ ಎಣ್ಣೆ’ ಬಿಟ್ಟುಕೊಂಡಿದ್ದಾರೆ. ಕಾತರ ಹೆಚ್ಚಾಗಿದೆ. ತಮ್ಮ ನಾಯಕನ ಹೊಸ ಅವತಾರದ ಮೊದಲ ನೋಟ ನೋಡಲು ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಪ್ರಚಾರ ಶುರುವಿಟ್ಟಾಗಿದೆ.
ಈ ಹಿಂದೆ ಇದೇ ನಿರ್ದೇಶಕ ಪ್ರಕಾಶ್ ಮತ್ತು ನಟ ‘ದರ್ಶನ್’ ಕಾಂಬಿನೇಶನ್ ನಲ್ಲಿ ಎರಡು ಸಾವಿರದ ಹದಿನೇಳರಲ್ಲಿ ಬಂದಿದ್ದ ‘ತಾರಕ್’ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಹಣ-ಹೆಸರು ಎರಡೂ ಮಾಡದೇ, ನಿರೀಕ್ಷೆ ಹುಸಿಗೊಳಿಸಿತ್ತು. ಇದೀಗ ಮತ್ತೆ ಈ ಜೋಡಿ ಒಂದಾಗಿ ಚಿತ್ರ ಕಟ್ಟುತ್ತಿದ್ದು, ಅಭಿಮಾನಿಗಳಿಗೆ ಗೆಲುವಿನ ಉಡುಗೊರೆಕೊಡಲು ತಯಾರಾಗಿದೆ. ಒಂದೆಡೆ ಕಾಟೇರ ಸಿನಿಮಾದ ಯಶಸ್ಸು ದರ್ಶನ್ ಅವರಿಗೆ ಉತ್ಸಾಹ ತುಂಬಿದ್ದು, ಡೆವಿಲ್ ಚಿತ್ರದ ಮೇಲೂ ನಿರೀಕ್ಷೆ ಇಡಲಾಗಿದೆ.