ಕೇಂದ್ರದಲ್ಲಿ ಚುನಾವಣೆಯ ಹೊತ್ತು. ದಿನ ಬೆಳಗಾದರೆ, ಹೊಸ-ಹೊಸ ಯೊಚನೆ-ಯೋಜನೆಗಳತ್ತ ಕೇಂದ್ರ ಚಿತ್ತ ಹರಿಸುತ್ತಿದೆ. ಮೊದಲಿಂದಲೂ ಇಂಡಿಯಾ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿ ಸರ್ಕಾರ, ಭಾರತ ಎಂಬ ಸ್ವದೇಶಿ ಮಂತ್ರ ಜಪಿಸುತ್ತಲೇ ಬಂದಿತ್ತು. ಈಗಂತೂ ಆ ಇಂಡಿಯಾ(IINDI Alliance) ಮೈತ್ರಿಕೂಟದ ಯಾತ್ರೆಗಳ ನಂತರದಲ್ಲಿ ಭಾರತ್ ಕಲ್ಪನೆಗೆ ಮತ್ತೊಂದಷ್ಟು ಪುಷ್ಟಿ ಬಂದಿತ್ತು. ಇದೀಗ “ಭಾರತ್ ಬ್ರಾಂಡ್ ರೈಸ್” ಚಾಲ್ತಿಗೆ ತರುವ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ.
ಇದೇ ಮಂಗಳವಾರ (6 ಪಫೆಬ್ರವರಿ) ಮಹತ್ವಾಕಾಂಕ್ಷೆಯ ‘ಭಾರತ್ ಬ್ರಾಂಡ್ ರೈಸ್’ ಮಾರಾಟಕ್ಕೆ ಕೇಂದ್ರ ಆಹಾರ ಸಚಿವ ‘ಪಿಯೂಷ್ ಗೋಯಲ್’ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಹಾಗೆಯೇ ವ್ಯಾಪಾರಕ್ಕಾಗಿ ಈ ಭಾರತ್ ಅಕ್ಕಿಯನ್ನು ಹೊತ್ತು ತಿರುಗಲು ತಯಾರಾದ ‘100 ಮೊಬೈಲ್ ವ್ಯಾನ್’ಗಳನ್ನು ಸಹ ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.
ಕೇಂದ್ರ ಸರಕಾರ ಅಳೆದು-ತೂಗಿ ಆಲೋಚಿಸಿ ‘ ಭಾರತ್ ರೈಸ್ ‘ ಅನ್ನು ಪ್ರತಿ ಕೆಜಿಗೆ ಇಪ್ಪತ್ತೊಂಬತ್ತು ರೂಪಾಯಿಗೆ ಪರಿಚಯಿಸುವ ಮೂಲಕ, ಕಳೆದ ವರ್ಷದಲ್ಲಿ ಚಿಲ್ಲರೆ ಮಾರಟದ ಅಕ್ಕಿಯ ಬೆಲೆಗಳಲ್ಲಿ ಹದಿನೈದು ಶೇಕಡದಷ್ಟು ಹೆಚ್ಚಿಸಿದ್ದನ್ನು ಈ ಬಾರಿ ಸರಿದೂಗಿಸುವ ಸಲುವಾಗಿ, ಮೋದಿ ಸರ್ಕಾರ ಈ ಪ್ರಯೋಗಕ್ಕೆ ಒಡ್ಡಿಕೊಂಡಿದೆ. ಅದರಂತೆ ಭಾರತ್ ರೈಸ್ 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಬರಲಿದೆ. ಅಸಲಿಗೆ ಇದರಲ್ಲೂ ಜಾಣ್ಮೆ ಪ್ರದರ್ಶಿಸಿರುವ ಕೇಂದ್ರ ಸರ್ಕಾರ, ನ್ಯಾಯ ಬೆಲೆ ಅಂಗಡಿ ಸೇರಿದಂತೆ ಇತರೇ ‘ಚಿಲ್ಲರೆ’ ವ್ಯಾಪಾರದವರು ತೂಕದಲ್ಲಿ/ ಅಳತೆಯಲ್ಲಿ ಹೆಚ್ಚು -ಕಡಿಮೆ ಮಾಡವುದನ್ನು ಗಮನದಲ್ಲಿಟ್ಟುಕೊಂಡು, ಭಾರತ್ ಅಕ್ಕಿಯನ್ನ ಐದು-ಹತ್ತು ಕೆಜಿಯ ಪ್ಯಾಕೆಟ್ ಮಾಡಿಸಲಾಗಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ’ (OMSS) ಮೂಲಕ ಸಬ್ಸಿಡಿ ದರದಲ್ಲಿ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಪ್ರಯತ್ನಿಸಿತ್ತು, ಆದರೆ ಅಂತಿಮವಾಗಿ ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ಕಂಡುಬಂದ ನಂತರದಲ್ಲಿ ಈಗ ಚಿಲ್ಲರೆ ಮಾರಾಟಕ್ಕೆ ಆಶ್ರಯಿಸಿತು.
ಕೇಂದ್ರ ಸರ್ಕಾರವು ‘ಭಾರತ್ ಬ್ರಾಂಡ್’ ಮೂಲಕ ‘ಅಕ್ಕಿಯ ಚಿಲ್ಲರೆ ಬೆಲೆಗೆ ಕಡಿವಾಣ ಹಾಕುವುದು ಮತ್ತು ಧಾನ್ಯಗಳ ಚಿಲ್ಲರೆ ದರಗಳಿಂದ ಬೇಸತ್ತಿರುವ ಜನ ಸಾಮಾನ್ಯರ ಹೊರೆ ಇಳಿಸಲು ಈ ಯೋಜನೆ ತರಲಾಗಿದೆ ಎಂಬುದು ಸರ್ಕಾರದ ಲೆಕ್ಕಾಚಾರದ ಮಾತು.
ಆರಂಭದಲ್ಲಿ, ಮೊಬೈಲ್ ವ್ಯಾನ್‌ಗಳು ಸೇರಿದಂತೆ ಕೇಂದ್ರೀಯ ಭಂಡಾರ್, NAFED ಮತ್ತು NCCF ಔಟ್‌ಲೆಟ್‌ಗಳ ಮೂಲಕ ಭಾರತ್ ಅಕ್ಕಿಯನ್ನು ಖರೀದಿಸಲು ಪ್ರವೇಶಿಸಬಹುದು. ಅಕ್ಕಿ,ಬೇಳೆ,ಗೋದಿ,ಈರುಳ್ಳಿ, ಸೇರಿದಂತೆ ಸುಮಾರು ದಿನಸಿಗಳು ಮುಂದಿನ ದಿನಗಳಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ವಿವಿಧ ಚಿಲ್ಲರೆ ಸರಪಳಿಗಳ ಮೂಲಕವೂ ಲಭ್ಯವಾಗಲಿದೆ .
ಒಟ್ಟಿನಲ್ಲಿ ಭಾರತ್ ಬ್ರಾಂಡ್ ರೈಸ್ ಇದು ಕೇಂದ್ರ ಸರ್ಕಾರವು, ಬಡವರು, ಮಧ್ಯಮ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಮಾಡಿದ ರೈಸ್ ಸ್ಟ್ರೈಕ್ ಎನ್ನಬಹುದು. ರಾಮಮಂದಿರ ಉದ್ಘಾಟಿಸಿ ಭಕ್ತಗಣಕ್ಕೆ ಶಕ್ತಿ ತುಂಬಿದ್ದ ನರೇಂದ್ರ ಮೋದಿ ಈ ಬಾರಿ ಭಾರತ್ ರೈಸ್ ಮೂಲಕ ಬೃಹತ್ ಬದಲಾವಣೆಗೆ ಹಾದಿ ಮಾಡಿಕೊಂಡಂತಿದೆ. ಸದ್ಯ ಈ ಯೋಜನೆ ಬಡ- ಮಧ್ಯಮ ವರ್ಗದವರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಹಣದುಬ್ಬರದ ಮಧ್ಯೆ, ಈ ಉತ್ಪನ್ನಗಳು ಗ್ರಾಹಕರಲ್ಲಿ ಬಹುಬೇಗ ಜನಪ್ರಿಯವಾಗುತ್ತಿದೆ. ಅಸಲಿಗೆ, ಈ ಭಾರತ್ ಬ್ರಾಂಡ್ ಮೂಲಕವೂ ಇಂಡಿಯಾ’ ತೆರವುಗೊಳಿಸುವ ಹಾಗೂ ಭಾರತ’ವನ್ನೇ ಗಟ್ಟಿಗೊಳಿಸುವ ನಿಟ್ಟಲ್ಲಿ ತರಲಾದ ಯೋಜನೆಗಳಲ್ಲೊಂದು ಎನ್ನಲಾಗುತ್ತಿದೆ. ಅದೇನೇ ಇರಲಿ. ಭಾರತೀಯರು ಮಾರುಕಟ್ಟೆಯಲ್ಲಿ ಲಭ್ಯವಿರುವ ‘ಭಾರತ ಅಕ್ಕಿ’ಯನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಭಾರತ್ ಬ್ರಾಂಡ್ ಯೋಜನೆ ಫಲಿಸಿದೆ.