ಬೆಂಗಳೂರು: ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಸೈಬರ್ ಕ್ರೈಮ್ ಗೆ ಒಳಗಾಗಿ ಬರೋಬ್ಬರಿ 14 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿತ್ತು. ಇದು ಮಾಸುವ ಮುನ್ನವೇ ಈಗ ಟೆಕ್ಕಿಯೊಬ್ಬರು ಬರೋಬ್ಬರಿ 2.24 ಕೋಟಿ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ನಗರದ ಅಮೃತಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಟೆಕ್ಕಿಯೊಬ್ಬರು ಈ ರೀತಿ ಹಣ ಕಳೆದುಕೊಂಡವರು. ಅಪರಿಚಿತ ದುಷ್ಕರ್ಮಿಯೊಬ್ಬ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ನಿಮ್ಮ ಏರ್ ಪಾರ್ಸಲ್ ನ್ನು ದೆಹಲಿಯ ಕಸ್ಟಮ್ಸ್ ನಲ್ಲಿ ಸೀಜ್ ಮಾಡಲಾಗಿದೆ. ಅದರಲ್ಲಿ ನಿಮ್ಮ ಹೆಸರಿನ ನಕಲಿ ಪಾಸ್ ಪೋರ್ಟ್, ಬ್ಯಾಂಕ್ ಎಟಿಎಂ ಕಾರ್ಡ್ ಗಳು, ಎಂಡಿಎಂಎ ಡ್ರಗ್ಸ್ ಇದೆ ಎಂದು ಸುಳ್ಳು ಹೇಳಿದ್ದಾನೆ. ಹೀಗಾಗಿ ದೂರು ದಾಖಲಿಸಿಕೊಳ್ಳಬೇಕಿದೆ ಎಂದಿದ್ದಾನೆ. ಇದಕ್ಕಾಗಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದಾನೆ. ಇದನ್ನು ನಂಬಿದ ಟೆಕ್ಕಿ ಅದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾನೆ. ನಂತರ ವಿಡಿಯೋ ಕಾಲ್ ಮಾಡಿ ಪೊಲೀಸ್ ಸಮವಸ್ತ್ರದಂತೆಯೇ ಕಾಣುವ ದಿರಿಸು ಧರಿಸಿದ್ದ ವ್ಯಕ್ತಿ, ನಿಮ್ಮ ಮೇಲೆ ಮನಿ ಲಾಂಡರಿಂಗ್ ಪ್ರಕರಣ ಕೂಡ ಇದೆ. ಸಿಬಿಐ ವಿಚಾರಣೆ ನಡೆಸುತ್ತದೆ ಎಂದು ಭಯ ಪಡಿಸಿದ್ದಾನೆ.
ಆನಂತರ ಇದನ್ನು ಕೈ ಬಿಡಲು ಹಣದ ಬೇಡಿಕೆ ಇಟ್ಟಿದ್ದಾನೆ. ಆರೋಪಿ ಮಾತು ನಂಬಿದ ಟೆಕ್ಕಿ ಹಂತ ಹಂತವಾಗಿ 8 ಖಾತೆಗೆಗಳಿಗೆ ಒಟ್ಟು 2,42,05,000 ರೂ. ವರ್ಗಾವಣೆ ಮಾಡಿದ್ದಾನೆ. ಆನಂತರ ಆತನಿಗೆ ಮೋಸ ಹೋಗಿರುವುದು ತಿಳಿದಿದೆ. ಈ ಕುರಿತು ಈಶಾನ್ಯ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.