ವಿಶ್ವ ವಿಖ್ಯಾತ ದಸರಾ ಹಬ್ಬದ ಅಂಬಾರಿಯನ್ನು, ದಾಖಲೆಯ ಎಂಟು ಬಾರಿ ಹೊತ್ತು ಮೆರೆದಿದ್ದ ಅರ್ಜುನನ ಸಮಾಧಿಯು ಅವ್ಯವಸ್ಥೆಯಿಂದ ಹಾಳಾಗುತ್ತಿರುವುದನ್ನು ಮನಗಂಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಟ್ವಿಟರ್ ಮೂಲಕ ಸಂಬಂಧಿಸಿದವರಿಗೆ ಮನವಿ ಮಾಡಿಕೊಂಡಿದ್ದಾರೆ.
“ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು, ತನ್ನ ಗಜ ಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ, ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರೂ ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ಸಲ್ಲಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ, ಇದಕ್ಕೊಂದು ಒಳ್ಳೆ ವ್ಯೆವಸ್ಥೆಯಾಗಲಿ” ಎಂದು ಗಜ ಖ್ಯಾತಿಯ ದರ್ಶನ್ ಟ್ವಿಟರ್ (ಎಕ್ಸ್) ಅಲ್ಲಿ ಪೋಸ್ಟ್ ಮಾಡುವ ಮೂಲಕ ಅರ್ಜುನನ ಮೇಲೆ ಕಾಳಜಿ ತೋರಿದ್ದಾರೆ.
ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ದರ್ಶನ್ ಅವರ ಪ್ರಾಣಿಪ್ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರೀಯೆ ದೊರೆಯುತ್ತಿದೆ. ಜನ ಒಕ್ಕೊರಲಿನಿಂದ, ಅರ್ಜುನನ ಸಮಾಧಿಯ ಸುವ್ಯವಸ್ಥೆಗೆ ಮನವಿ ಮಾಡುತ್ತಿದ್ದಾರೆ.
ಸದ್ಯದಲ್ಲೇ ಈ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳುವ ಸೂಚನೆಯಂತೂ ಸಿಕ್ಕಿದೆ. ದರ್ಶನ್ ಅವರು ಹೇಳಿದಂತೆ “ಮಳೆಗಾಲದ ಮುನ್ನವೇ ನಮ್ಮ ಹೆಮ್ಮೆಯ ಗಜರಾಜ ಅರ್ಜುನನ ಸಮಾಧಿಯು ಸುವ್ಯೆವಸ್ಥಿತಗೊಳ್ಳುವಂತಾಗಲಿ” ಎಂಬುದು ಪತ್ರಿಕೆಯ ಆಶಯ.