ನವದೆಹಲಿ: ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ ಅಮೇಥಿಯಿಂದ ಈಗ ಗಾಂಧಿ ಕುಟುಂಬ ದೂರವಾಗಿದೆ. ಇದರ ಬೆನ್ನಲ್ಲಿಯೇ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಐದು ಅವಧಿಗೆ ರಾಯ್ಬರೇಲಿ ಪ್ರತಿನಿಧಿಸಿದ್ದ ಸೋನಿಯಾ ಗಾಂಧಿ ಚುನಾವಣಾ ರಾಜಕೀಯ ಬಿಟ್ಟು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅಮೇಥಿಯಲ್ಲಿ ಸೋತ ರಾಹುಲ್ ಗಾಂಧಿ ವಯನಾಡಿನಲ್ಲಿ ಗೆದ್ದು, ಈಗ ಅಲ್ಲಿಂದಲೇ ಸ್ಪರ್ಧೆಗೆ ಮುಂದಾಗಿದ್ದಾರೆ. ಹೀಗಾಗಿ ರಾಯ್ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಕಾರ್ಯಕರ್ತರ ನಂಬಿಕೆ ಪ್ರಕಾರ ಸೋನಿಯಾ ಪ್ರತಿನಿಧಿಸುತ್ತಿದ್ದ ರಾಯ್ಬರೇಲಿಯಿಂದ ಪ್ರಿಯಾಂಕಾ ಗಾಂಧಿ, ಅಮೇಥಿಯಿಂದ ರಾಹುಲ್ ಗಾಂಧಿ ಮತ್ತೆ ಕಣಕ್ಕಿಳಿಬಹುದು ಎಂದು ಅಂದಾಜಿಸಲಾಗಿದೆ. ಇದರ ಮಧ್ಯೆ ರಾಬರ್ಟ್ ವಾದ್ರಾ ಹೆಸರು ಕೇಳಿ ಬರುತ್ತಿದೆ.
ಅಮೇಥಿಯಲ್ಲಿ ಸಂಸದೆ ಸ್ಮೃತಿ ಇರಾನಿ ಇದ್ದಾರೆ. ಸದ್ಯ ಖಾಲಿಯಾಗುತ್ತಿರುವ ಸ್ಥಾನ ತುಂಬಿಕೊಳ್ಳಲು ರಾಬರ್ಟ್ ವಾದ್ರಾ ಯತ್ನಿಸುತ್ತಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.