ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನನಿತ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ಸುತ್ತ ಎಸ್.ಐ.ಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮಹಿಳಾ ಸಂಘಟನೆಗಳು ಮಿಂಚಂಚೆ(ಈಮೇಲ್) ಮೂಲಕ ಪತ್ರ ಬರೆದಿವೆ.
“ಕೊಂದವರು ಯಾರು? Who killed women in Dharmasthala?” ಎಂಬ ಶೀರ್ಷಿಕೆಯಡಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯಲಾಗಿದೆ.
“ಪತ್ರದಲ್ಲಿ ಏನಿದೆ?”
ಜುಲೈ 2025ರಲ್ಲಿ ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿದ್ದರು. ಧರ್ಮಸ್ಥಳದಲ್ಲಿ ನಡೆದಿದ್ದ ಅಸಹಜ ಸಾವು, ಲೈಂಗಿಕ ದೌರ್ಜನ್ಯಗಳ ಬಗ್ಗೆ ಎಸ್.ಐ.ಟಿ ರಚಿಸಿ ಎಂದು ಪತ್ರ ಬರೆಯಲಾಗಿತ್ತು. ಮಾಧ್ಯಮಗಳಲ್ಲಿ ಮತ್ತು ಸ್ಥಳೀಯ ಸಾಮಾಜಿಕ ಹೋರಾಟಗಾರರು ಹೇಳುವಂತೆ ಸಾಕಷ್ಟು ದೌರ್ಜನ್ಯ ನಡೆದಿತ್ತು. 2012ರ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ, 1986 ಪದ್ಮಲತಾ ಕೊಲೆ ಪ್ರಕರಣ, 1979 ವೇದವಲ್ಲಿ ಪ್ರಕರಣ ಇವುಗಳಲ್ಲಿ ಪ್ರಮುಖವಾದದ್ದು. ಆರ್.ಟಿ.ಐ ದಾಖಲೆ ಅನ್ವಯ 2001-2012 ರ ನಡುವೆ ಉಜಿರೆ ಮತ್ತು ಧರ್ಮಸ್ಥಳದಲ್ಲಿ 424 ಸಾವುಗಳು ಸಂಭವಿಸಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿದರೂ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಜುಲೈ ತಿಂಗಳ ಆರಂಭದಲ್ಲಿ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹಲವು ಸಾವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವುದಾಗಿ ಮಾಧ್ಯಮಗಳ ಮುಂದೆ ಬಂದಿದ್ದ. ಮಾಧ್ಯಮಗಳು ಹಾಗೂ ಕೆಲವು ರಾಜಕೀಯ ಮುಖಂಡರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಎಂದು ಹೇಳಿಕೊಂಡು ಬಂದಿದ್ದ ಸುಜಾತ ಭಟ್ ಗೆ ರಕ್ಷಣೆ ಕೊಡಬೇಕಾಗಿತ್ತು, ಆದರೆ ಕೊಟ್ಟಿಲ್ಲ. ತನಿಖೆ ನಡೆಯುತ್ತಿರುವಾಗಲೇ ಹಲವು ತಿರುವುಗಳನ್ನು ಇದು ಪಡೆದುಕೊಂಡಿದೆ. ದೂರುದಾರರನ್ನೇ ಎಸ್.ಐ.ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬಿಜೆಪಿ ಇದನ್ನು ಧರ್ಮಯುದ್ಧ ಎಂದು ಬಿಂಬಿಸುತ್ತಿದೆ. ಎಸ್.ಐ.ಟಿ ತನಿಖೆ ನಡೆಯುತ್ತಿರುವಾಗಲೇ ಕೆಲವು ಕಾಂಗ್ರೆಸ್ ನಾಯಕರೂ ಹೇಳಿಕೆಗಳನ್ನು ಕೊಡುವುದು ಕಂಡು ಬರುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್, ಗೃಹಮಂತ್ರಿ ಪರಮೇಶ್ವರ್, ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಈ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡದಂತೆ ವಾರ್ನ್ ಮಾಡಿದ್ದಾರೆ. ಹಾಗಾಗಿ ಒಬ್ಬ ವಿರೋಧಪಕ್ಷದ ಹಿರಿಯ ನಾಯಕಿಯಾಗಿರುವ ನಿಮಗೆ ಪತ್ರ ಬರೆಯುತ್ತಿದ್ದೇವೆ. 2018ರ ಉಗ್ರಪ್ಪ ವರದಿಯನ್ನು ಎಸ್.ಐ,ಟಿ ತನಿಖೆಯಲ್ಲಿ ಪರಿಗಣಿಸಬೇಕು. ಈ ಪ್ರಕರಣದ ಸಂತ್ರಸ್ಥರಿಗೆ ನ್ಯಾಯ ಸಿಗಬೇಕು. ಕಾಂಗ್ರೆಸ್ ನಾಯಕರು ಎಸ್.ಐ.ಟಿ ತನಿಖೆಯ ವಿರುದ್ಧ ಹೇಳಿಕೆಗಳನ್ನು ಕೊಡಬಾರದು. ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳನ್ನೂ ತನಿಖೆ ನಡೆಸಬೇಕು ಎಂದು ಪತ್ರದ ಮೂಲಕ ಒತ್ತಾಯಿಸಲಾಗಿದೆ.