ನಂಜನಗೂಡು : ಕೆರೆಯಲ್ಲಿ ಈಜಲು ಹೋದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ. ಬದನವಾಳು ಗ್ರಾಮದ ಮೋಹಿತ್ (8) ಆರ್ಯ (9) ಮೃತ ದುರ್ದೈವಿಗಳು.
ಇಂದು ಮಧ್ಯಾಹ್ನದ ಸಮಯದಲ್ಲಿ ಬದನವಾಳು ಗ್ರಾಮದಲ್ಲಿರುವ ಕೆರೆಗೆ ಈಜಲು ಮೋಹಿತ್ ಮತ್ತು ಆರ್ಯ ಎಂಬ ಇಬ್ಬರು ಕೆರೆ ಬಳಿ ಬಟ್ಟೆ ಬಿಚ್ಚಿ ಈಜಲು ಇಳಿದಿದ್ದಾರೆ. ಈ ವೇಳೆ ಕೆರೆಯ ಸುಳಿಗೆ ಸಿಲುಕಿ ಮೇಲೆ ಬಾರಲಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೋಹಿತ್ ಎಂಬ ಬಾಲಕ ಮೂರನೇ ತರಗತಿ, ಆರ್ಯ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ದಸರಾ ರಜೆ ಹಿನ್ನೆಲೆಯಲ್ಲಿ ಮಕ್ಕಳು ಕೆರೆಗೆ ಈಜಲು ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಕವಲಂದೆ ಪೊಲೀಸ್ ಪಿಎಸ್‌ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕರ ಶವವನ್ನು ಕೆರೆಯಿಂದ ಹೊರಗೆ ತೆಗೆಯಲಾಗಿದೆ.
ಮೃತ ಮಕ್ಕಳ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಕಾರ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.