ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ಅಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ತನಿಖೆಗೆ ಗೃಹ ಸಚಿವ ಪರಮೇಶ್ವರ್ ಸೂಚಿಸಿದ್ದಾರೆ.
ದರ್ಶನ್ ಜೈಲಿನಲ್ಲಿ ರೌಡಿಗಳೊಂದಿಗೆ ಸೇಲ್ ನ ಆಚೆ ಕಾಫಿ ಮಗ್ ಕೈಯಲ್ಲಿ ಹಿಡಿದು, ಸಿಗರೇಟ್ ಸೇದುತ್ತ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದೆ. ಅಲ್ಲದೇ, ರೌಡಿಯ ಆಪ್ತನೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ರಾಜಾತಿಥ್ಯದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಈ ಬೆನ್ನಲ್ಲೇ ಗೃಹಸಚಿವ ಜಿ.ಪರಮೇಶ್ವರ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ದರ್ಶನ್ ಅವರು ಜೈಲಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಅವರು ವಿಲ್ಸನ್ ಗಾರ್ಡನ್ ನಾಗ, ಮ್ಯಾನೇಜರ್ ನಾಗರಾಜ್ ಸಮಯ ಕಳೆಯುತ್ತಿರುವ ಫೋಟೋವನ್ನು ಯಾರೋ ವೈರಲ್ ಮಾಡಿದ್ದಾರೆ. ಇದರಿಂದ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡುವಂತಾಗಿದೆ. ಈ ಕುರಿತು ಸದ್ಯ ಬಂದಿಖಾನೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಜೊತೆ ಗೃಹ ಸಚಿವ ಪರಮೇಶ್ವರ್ ಚರ್ಚೆ ನಡೆಸಿದ್ದಾರೆ.
ಪರಮೇಶ್ವರ್ ಅವರು ಮಾಲಿನಿ ಕೃಷ್ಣಮೂರ್ತಿ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ದರ್ಶನ್ ಗೆ ರಾಜಾತಿಥ್ಯದ ಕುರಿತು ಪರಮೇಶ್ವರ್ ಗರಂ ಆಗಿದ್ದಾರೆ. ಅಲ್ಲದೇ, ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಜೈಲಿನಲ್ಲಿ ದರ್ಶನ್ ಗೆ ಮೊಬೈಲ್ ಬಳಕೆಗೂ ಅವಕಾಶ ಸಿಗುತ್ತಿದೆ. ಸಹ ಖೈದಿಯ ಮೊಬೈಲ್ನಿಂದ ಇತರ ರೌಡಿ ಶೀಟರ್ ಕುಟುಂಬದವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಇದು ಕೂಡ ವೈರಲ್ ಆಗಿದೆ. ಹೀಗಾಗಿ ತನಿಖೆಗೆ ಆದೇಶಿಸಿದ್ದಾರೆ. ದರ್ಶನ್ ಗೆ ಅಲ್ಲಿ ರಾಜಾತಿಥ್ಯ ಸಿಗುತ್ತಿರುವುದಕ್ಕೆ ರೇಣುಕಾಸ್ವಾಮಿ ಕುಟುಂಬ ಕಣ್ಣೀರು ಸುರಿಸಿದೆ.