ಪಾಟ್ನಾ: “ಟೈಗರ್ ಅಭೀ ಜಿಂದಾ ಹೈ” (ಹುಲಿ ಇನ್ನೂ ಬದುಕಿದೆ) ಎಂದು ಬರೆಯಲಾಗಿರುವ ಪೋಸ್ಟರ್‌ಗಳು ಬಿಹಾರದಾದ್ಯಂತ ರಾರಾಜಿಸುತ್ತಿವೆ. ಅನೇಕರು ನಿತೀಶ್ ಕುಮಾರ್ ಅವರ ರಾಜಕೀಯ ಶಕ್ತಿ ಕುಂದಿದೆ ಎಂದು ಭಾವಿಸಿದ್ದರೂ, ಅನಾರೋಗ್ಯದ ವದಂತಿಗಳ ನಡುವೆಯೂ, 74ರ ಹರೆಯದ ಬಿಹಾರದ ‘ಸುಶಾಸನ್ ಬಾಬು’ ನಿತೀಶ್ ಕುಮಾರ್ ತಮ್ಮ ರಾಜಕೀಯ ಚಾಣಾಕ್ಷತನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಸುಮಾರು 20 ವರ್ಷಗಳ ಆಡಳಿತ ವಿರೋಧಿ ಅಲೆಯ ಹೊರತಾಗಿಯೂ, ಜೆಡಿಯು ತಾನು ಸ್ಪರ್ಧಿಸಿದ್ದ 101 ಸ್ಥಾನಗಳ ಪೈಕಿ 75ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಫಲಿತಾಂಶವು ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಲ್ಲಿ ಉಳಿಯುವಂತೆ ಮಾಡಿದೆ. 2020ರ ಚುನಾವಣೆಗೆ ಹೋಲಿಸಿದರೆ ಜೆಡಿಯು ಈ ಬಾರಿ ಹೆಚ್ಚುವರಿ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಶೇ. 88ರಷ್ಟು ಸ್ಥಾನಗಳನ್ನು ಉಳಿಸಿಕೊಂಡಿದೆ. ಇದು ಪಕ್ಷದ ಅದ್ಭುತ ಪುನರಾಗಮನವನ್ನು ಸೂಚಿಸುತ್ತದೆ.

ಎನ್‌ಡಿಎ ಒಳಗೆ ‘ದೊಡ್ಡಣ್ಣ’ನ ಪೈಪೋಟಿ
2020ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಜೆಡಿಯುಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಮೈತ್ರಿಕೂಟದಲ್ಲಿ ‘ದೊಡ್ಡಣ್ಣ’ನಾಗಿ ಹೊರಹೊಮ್ಮಿತ್ತು. ಜೆಡಿಯು 115 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 43 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿ 74 ಸ್ಥಾನಗಳನ್ನು ಗಳಿಸಿತ್ತು. ಆದರೆ, ಈ ಬಾರಿಯ ಫಲಿತಾಂಶವು ಜೆಡಿಯು ವನ್ನು ಕಡೆಗಣಿಸುವಂತಿಲ್ಲ ಎಂಬ ಸಂದೇಶವನ್ನು ಬಿಜೆಪಿಗೆ ನೀಡಿದೆ. ಸಮಾನ ಸೀಟು ಹಂಚಿಕೆಯ ನಡುವೆಯೂ ಜೆಡಿಯು ಉತ್ತಮ ಪ್ರದರ್ಶನ ನೀಡಿದ್ದು, ಮೈತ್ರಿಕೂಟದಲ್ಲಿ ಯಾರು ‘ದೊಡ್ಡಣ್ಣ’ ಎಂಬ ಪ್ರಶ್ನೆಗೆ ಅಂತಿಮ ಫಲಿತಾಂಶ ಉತ್ತರ ನೀಡಲಿದೆ.
ನಿತೀಶ್ ಕುಮಾರ್ ಅವರ ವರ್ಚಸ್ಸಿನ ಗುಟ್ಟು
ನಿತೀಶ್ ಕುಮಾರ್ ಅವರ ಯಶಸ್ಸಿನ ಹಿಂದೆ ಜಾತಿ ಸಮೀಕರಣ ಮತ್ತು ಮಹಿಳಾ ಮತದಾರರ ಅಚಲ ಬೆಂಬಲ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ಮಹಿಳಾ ಫಲಾನುಭವಿಗಳಿಗೆ ತಲಾ 10,000 ರೂ.ಗಳನ್ನು ವರ್ಗಾಯಿಸುವ ಅವರ ಯೋಜನೆಯು ಮಹಿಳಾ ಮತದಾರರ ಮೇಲೆ ಹಿಡಿತವನ್ನು ಮತ್ತಷ್ಟು ಬಲಪಡಿಸಿತು. ಈ ಚುನಾವಣೆಯಲ್ಲಿ ಪುರುಷರಿಗಿಂತ ಶೇ.10ರಷ್ಟು ಹೆಚ್ಚು ಮಹಿಳೆಯರು (ಶೇ. 74.03) ಮತ ಚಲಾಯಿಸಿದ್ದಾರೆ. ‘ಪಲ್ಟು ರಾಮ್’ ಎಂಬ ಟೀಕೆಗಳ ನಡುವೆಯೂ, ಅವರು ತಮ್ಮ ‘ಸುಶಾಸನ್ ಬಾಬು’ ಎಂಬ ಬಿರುದನ್ನು ಉಳಿಸಿಕೊಂಡಿದ್ದಾರೆ. ಅವರ ಕ್ಲೀನ್ ಇಮೇಜ್ ಮತ್ತು ಅಭಿವೃದ್ಧಿ ಕಾರ್ಯಗಳು ಅವರನ್ನು ಬಿಹಾರ ರಾಜಕೀಯದ ಅಳಿಸಲಾಗದ ಶಕ್ತಿಯಾಗಿ ಉಳಿಸಿದೆ. ಒಂದು ವೇಳೆ ಅವರು ಈ ಬಾರಿಯೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಅದು ಅವರ ದಾಖಲೆಯ 10ನೇ ಅಧಿಕಾರಾವಧಿಯಾಗಲಿದೆ. ಈ ಫಲಿತಾಂಶದ ಮೂಲಕ ನಿತೀಶ್ ಕುಮಾರ್ ಅವರು ಟೈಗರ್ ಅಭೀ ಜಿಂದಾ ಹೇ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಬಾಂಬರ್‌ನಿಂದ ತಾಲಿಬಾನ್ ಮಾದರಿ ನಿಯಮ : ಅಲ್-ಫಲಾಹ್ ವಿವಿ ವಿದ್ಯಾರ್ಥಿಗಳಿಂದ ಸ್ಫೋಟಕ ಮಾಹಿತಿ



















