ಉಡುಪಿ : ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಹರೀಶ್ ರಾಯ್ ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ರಾಯ್ ಅವರು ಮೂಲತಃ ಉಡುಪಿಯ ಅಂಬಲಪಾಡಿಯವರು.ಹೀಗಾಗಿ ಹುಟ್ಟೂರಿನಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ. ಅಂತ್ಯಕ್ರಿಯೆಯ ಎಲ್ಲ ವೆಚ್ಚವನ್ನು ನಟ ಧ್ರುವ ಸರ್ಜಾ ನೀಡುತ್ತಿದ್ದು, ಅವರ ಕುಂಟುಬದ ನೆರವಿಗೆ ನಿಂತಿದ್ದಾರೆ.

ಸದ್ಯ ಹರೀಶ್ ರಾಯ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿರುವ ಅಂಜನಾಪುರದಲ್ಲಿರುವ ಮನೆಯ ಬಳಿ ಎರಡು ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಮಧ್ಯಾಹ್ನದ ಬಳಿಕ ಉಡುಪಿಗೆ ಪಾರ್ಥಿವ ಶರೀರ ರವಾನೆ ಆಗಲಿದೆ. ಶುಕ್ರವಾರ ಉಡುಪಿಯಲ್ಲಿ ಹರೀಶ್ ರಾಯ್ ಅಂತ್ಯ ಸಂಸ್ಕಾರ ನಡೆಯಲಿದೆ.

ಉಡುಪಿಯಲ್ಲಿ ಸ್ವರ್ಣೋದ್ಯಮ ನಡೆಸುವ ಕುಟುಂಬಕ್ಕೆ ಹರೀಶ್ ರಾಯ್ ಸೇರಿದವರು. ದಶಕಗಳ ಹಿಂದೆ ಪ್ರಖ್ಯಾತಿ ಪಡೆದಿದ್ದ ನೊವೆಲ್ಟಿ ಜ್ಯುವೆಲ್ಲರ್ಸ್ ಕುಟುಂಬ ಇವರದ್ದು. ಕೃಷ್ಣಮಠದ ರಥ ಬೀದಿ ಪರಿಸರದಲ್ಲಿ ಸ್ವರ್ಣೋದ್ಯಮ ಜನಪ್ರಿಯವಾಗಿತ್ತು. ಹರೀಶ್ ರಾಯ್ ಅವರನ್ನು ಕಳೆದುಕೊಂಡ ನೋವಿನಲ್ಲಿರುವ ಕುಟುಂಬದವರು ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ಪಾರ್ಥಿವ ಶರೀರ ಬೆಂಗಳೂರಿನಿಂದ ಉಡುಪಿಗೆ ಬಂದ ಬಳಿಕ ಅಂತಿಮ ಸಂಸ್ಕಾರಕ್ಕೆ ಕುಟುಂಬದವರು ಸಿದ್ಧತೆ ಮಾಡಿಕೊಳ್ಳಲಿದ್ದಾರೆ.
ನಿಧನದ ಬಳಿಕ ಅಂಗಾಂಗ ದಾನ ಮಾಡಬೇಕು ಎಂಬುದು ಹರೀಶ್ ರಾಯ್ ಅವರ ಆಶಯ ಆಗಿತ್ತು. ತಮ್ಮ ಸಾವಿನ ನಂತರ ಬೇರೆಯವರಿಗೆ ಅನುಕೂಲ ಆಗಲಿ ಎಂಬ ಉದ್ದೇಶ ಅವರಿಗೆ ಇತ್ತು. ಆ ಬಗ್ಗೆ ಪತ್ನಿ ಬಳಿ ಅವರು ಹೇಳಿಕೊಂಡಿದ್ದರು. ಆದರೆ ಕ್ಯಾನ್ಸರ್ ಇದ್ದ ಕಾರಣದಿಂದ ಅಂಗಾಗಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ : ಕೆಜಿಎಫ್ “ಚಾಚಾ” ಹರೀಶ್ ರಾಯ್ ವಿಧಿವಶ



















